ಎಂಪಿ ಎಲೆಕ್ಷನ್ ಗೆ ದಿನಗಣನೆ ಆರಂಭ ಆಗಿರುವ ಹೊತ್ತಲ್ಲೇ ಕಾಂಗ್ರೆಸ್ ಪಾಳೆಯಕ್ಕೆ ಗುಪ್ತಚರ ವರದಿಯೊಂದು ಹುಮ್ಮಸ್ಸು ತಂದಿದೆ. ಎಂಪಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆ ಭಾರಿ ಲಾಭ ಕಾದಿದೆ ಎಂದು ವರದಿ ಹೇಳಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಇಂಟಲಿಜೆನ್ಸ್ ವಿಭಾಗದಿಂದ ವರದಿ ತಯಾರಿಸಲಾಗಿದೆ. ಈ ವರದಿ ಪ್ರಕಾರ ಈಗ ಎಲೆಕ್ಷನ್ ನಡೆದರೆ ಕಾಂಗ್ರೆಸ್ ಗೆ ಹತ್ತಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಹತ್ತು ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಕಳೆದ ಬಾರಿ ಒಂದೇ ಸ್ಥಾನ ಗಳಿಸಿದ್ದ ಕಾಂಗ್ರೆಸ್ಗೆ ಈ ಬಾರಿ ಬಂಪರ್ ಎಂದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಇಂಟಲಿಜೆನ್ಸ್ ವರದಿಯನ್ನು ಪಕ್ಷದ ವರಿಷ್ಠರಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಇನ್ನಷ್ಟು ಸ್ಥಾನಕ್ಕೆ ಗುರಿಯಿಟ್ಟಿದ್ದಾರೆ. ಇದರಿಂದ ಉತ್ಸಾಹಗೊಂಡು ಬಿಜೆಪಿ ಮಣಿಸುವ ಉಮ್ಮೇದಲ್ಲಿ ಕೈ ಪಡೆ ಕೆಲಸ ಮಾಡಲು ಅಣಿಯಾಗಿದೆ.
ಇಂಟಲಿಜೆನ್ಸ್ ವರದಿಯಲ್ಲಿ ಇವೆ ಕುತೂಹಲಕರ ಅಂಶಗಳು
ವರದಿ ಪ್ರಕಾರ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್ ಕಮಾಲ್ ಮಾಡಲಿದೆ. ರಾಜಧಾನಿಯ ಉತ್ತರ, ದಕ್ಷಿಣ ಮತ್ತು ಸೆಂಟ್ರಲ್ ಕ್ಷೇತ್ರಗಳಲ್ಲಿ ಕೈ ಗೆ ಮುನ್ನಡೆ ಇದೆ. ಚಿಕ್ಕಬಳ್ಳಾಫುರ, ತುಮಕೂರು, ಕೋಲಾರ ಮತ್ತು ಮಂಡ್ಯದಲ್ಲಿ ಮೈತ್ರಿ ಬಿಕ್ಕಟ್ಟಿನ ಲಾಭ ಸಾಧ್ಯತೆ ಇದೆ. ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿ ಬಿಕ್ಕಟ್ಟು ಸೃಷ್ಟಿ ಆದರೆ ಈ ಕ್ಷೇತ್ರಗಳಲ್ಲಿ ಕೈ ಕಮಾಲ್ ಮಾಡಲಿದೆ. ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಕ್ಷೇತ್ರಗಳಲ್ಲಿ ಬಿಜೆಪಿ ಆಂತರಿಕ ಕಲಹ ಇದೆ. ಇದರ ಲಾಭವನ್ನು ಕಾಂಗ್ರೆಸ್ ಪಡೆಯಬಹುದು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಉಳಿದಂತೆ ಬಳ್ಳಾರಿ, ಬೆಳಗಾವಿ ಹಾಗೂ ಕಲಬುರಗಿ ಕ್ಷೇತ್ರಗಳಲ್ಲಿ ಒಳ್ಳೆಯ ವಾತಾವರಣವಿದ್ದು, ಚಿತ್ರದುರ್ಗ ಮತ್ತು ದಾವಣಗೆರೆಗಳಲ್ಲೂ ಉತ್ತಮ ಅಭ್ಯರ್ಥಿ ಹಾಕಿ ಶ್ರಮ ಹಾಕಬೇಕು. ಬಿಜೆಪಿಯಲ್ಲಿ ಒಳಜಗಳ , ಗುಂಪುಗಾರಿಕೆ ಇದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದರೆ ಭಾರಿ ಅನುಕೂಲ ಎಂದು ವರದಿ ಹೇಳಿದೆ.
ಈ ಸೀಕ್ರೆಟ್ ರಿಪೋರ್ಟ್ ಕಂಡು ಕೈ ಪಾಳೆಯ ಹಿರಿ ಹಿರಿ ಹಿಗ್ಗುತ್ತಿದೆ.
ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಬಿಜೆಪಿಯ ಬೆಂಬಲಕ್ಕೆ ನಿಂತಿದ್ದರು. 28 ಕ್ಷೇತ್ರಗಳಲ್ಲಿ ಬರೋಬ್ಬರಿ 25 ಸ್ಥಾನಗಳಲ್ಲಿ ಬಿಜೆಪಿ ಸಂಸದರನ್ನು ಚುನಾಯಿಸಿದ್ದರು. ಆದರೆ, ಈ ಬಾರಿ ಇಂತಹ ಪರಿಸ್ಥಿತಿ ಸಾಧ್ಯವಿಲ್ಲ ಎನ್ನುವುದು ಇದೀಗ ಬಯಲಾಗಿದೆ. ಈ ಬಾರಿ ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ. ಬಿಜೆಪಿ ತನ್ನದೇ ಪ್ರಾಬಲ್ಯದ 10 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಇಂತಹ ಭೀತಿಯೊಂದು ಇದೀಗ ಬಿಜೆಪಿ ವಲಯದಲ್ಲಿ ಕಂಡು ಬರುತ್ತಿದೆ. ಈ 10 ಸ್ಥಾನಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗಲಿದ್ದಾರೆ ಎನ್ನುವ ಆಂತರಿಕ ವರದಿಯೊಂದು ರಾಷ್ಟ್ರೀಯ ನಾಯಕರ ತಲುಪಿದೆ.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದ ಕ್ಷೇತ್ರಗಳ ಪೈಕಿ ಗುಲ್ಬರ್ಗಾ, ಕೋಲಾರ, ಚಿತ್ರದುರ್ಗ, ಬೆಳಗಾವಿ, ರಾಯಚೂರು, ಹಾವೇರಿ, ಧಾರವಾಡ, ಕೊಪ್ಪಳ, ದಾವಣಗೆರೆ ಸೇರಿದಂತೆ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಬ್ಯರ್ಥಿಗಳು ಮುಖಭಂಗ ಅನುಭವಿಸಿದರೆ, ಕಾಂಗ್ರೆಸ್ ನಾಯಕರು ಗೆಲುವಿನ ನಗೆ ಬೀರಲಿದ್ದಾರೆ ಎನ್ನುವ ಅಂಶವು ಆಂತರಿಕ ವರದಿಯಲ್ಲಿ ಬಹಿರಂಗವಾಗಿದೆ. ಇದು ಇದೀಗ ಬಿಜೆಪಿ ನಾಯಕರು ನಿದ್ದೆಗೆಡುವಂತೆ ಮಾಡಿಸಿದೆ. ಇದನ್ನ ಅರಿತ ಬಿಜೆಪಿ ವಲಯದ ನಾಯಕರು ತಕ್ಷಣ ಮೈ ಕೊಡವಿಕೊಂಡು ಏಳಲೇಬೇಕಾದ ಅನಿವಾರ್ಯತೆ , ತಮ್ಮ ಶಕ್ತಿಯನ್ನು ಒಂದೆಡೆ ಕೇಂದ್ರೀಕರಿಸಲು ಮುಂದಾಗುವಂತಹ ಪರಿಸ್ಥಿತಿ ಕಂಡು ಬಂದಿದೆ.
ಸದ್ಯ ಬಹಿರಂಗಗೊಂಡಿರುವ ಆಂತರಿಕ ವರದಿ ಒಂದೆಡೆ ಕಾಂಗ್ರೆಸ್ ವಲಯದಲ್ಲಿ ಸಂತಸದ ಅಲೆಗಳನ್ನು ಸೃಷ್ಠಿಸಿದ್ದರೆ, ಬಿಜೆಪಿ ವಲಯದ ನಾಯಕರ ಕಾಲ ಕೆಳಗಿನ ಭೂಮಿ ಕುಸಿಯುವಂತೆ ಮಾಡಿ ಎನ್ನಬಹುದಾಗಿದೆ.