ಕೊಪ್ಪಳ: ಕೆಲ ದಿನಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ರಾಜ್ಯಾದ್ಯಂತ ನಡೆಯುತ್ತಿದೆ. ಇಂದು ಸಂಸ್ಕೃತ ಮತ್ತು ಉರ್ದು ವಿಷಯದ ಪರೀಕ್ಷೆ ನಡೆಯುತ್ತಿವೆ. ವಿಶೇಷವೆಂದರೆ, ಮೂವರೇ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು ಕೂಡಾ ಇಪ್ಪತ್ತು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೌದು ಕೊಪ್ಪಳ ನಗರದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವಿದ್ದು, ಈ ಪರೀಕ್ಷಾ ಕೇಂದ್ರದಲ್ಲಿ ಇಂದು ಮೂವರೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಉರ್ದು ಪತ್ರಿಕೆ, ಓರ್ವ ವಿದ್ಯಾರ್ಥಿನಿ ಸಂಸ್ಕ್ರತ ಪರೀಕ್ಷೆ ಗೆ ಹಾಜರಾಗಿದ್ದಾರೆ.
ಮೂವರೇ ವಿದ್ಯಾರ್ಥಿಗಳು ಪರೀಕ್ಷೆ ಬರೆದ್ರು ಕೂಡಾ ಪರೀಕ್ಷಾ ಅಕ್ರಮಗಳು ನಡೆಯದಂತೆ ಮತ್ತು ಅಚ್ಚುಕಟ್ಟಾಗಿ ಪರೀಕ್ಷೆ ನಡೆಯಬೇಕು ಅನ್ನೋ ಕಾರಣದಿಂದ ಬೇರೆ ಪರೀಕ್ಷೆ ನಡೆದಾಗ ಯಾವ ರೀತಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೋ ಅದೇ ರೀತಿ ಇಂದು ಕೂಡಾ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಇಬ್ಬರು ರೂಮ್ ಸೂಪರವೈಸರ್ ಸೇರಿದಂತೆ ಛೀಫ್ ಕಸ್ಟೋಡಿಯನ್, ಜಂಠಿ ಅಧೀಕ್ಷಕರು, ಆಫೀಸ್ ಸುಪರಿಂಟೆಂಡೆಂಟ್, ಓರ್ವ ಉತ್ತರ ಪತ್ರಿಕೆ ಪಾಲಕರು, ಓರ್ವ ಕಚೇರಿ ಸಹಾಯಕ, ಓರ್ವ ಟೈಪಿಸ್ಟ್, ಓರ್ವ ಜಾಗೃತದಳ ಸಿಬ್ಬಂದಿ, ಓರ್ವ ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಇಪ್ಪತ್ತು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ.