ಕೊಪ್ಪಳ; ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಅನ್ನೋ ಉದ್ದೇಶದಿಂದ ಬಿಜೆಪಿ ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಿದೆ. ಬಿಎಸ್ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿದ್ದ ಕೊಪ್ಪಳದ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣಗೆ ಟಿಕೆಟ್ ಮಿಸ್ ಆಗಿದೆ. ಅಮಿತ್ ಶಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಡಾ. ಕೆ ಬಸವರಾಜ್ಗೆ ಟಿಕೆಟ್ ಸಿಕ್ಕಿದೆ. ಇದು ಕರಡಿ ಸಂಗಣ್ಣ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಸಂಗಣ್ಣ ಬೆಂಬಲಿಗರು ಮುನಿಸಿಕೊಂಡಿದ್ದಾರೆ.
ಕೊಪ್ಪಳ ಲೋಕಸಭಾ ಸದಸ್ಯರಿಗೆ ಬಿಜೆಪಿ ಹೈ ಕಮಾಂಡ್ ಶಾಕ್ ಕೊಟ್ಟಿದೆ.ಮೂರನೇ ಬಾರಿ ಕೂಡಾ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಸಿಗದೇ ಇದ್ದಿದ್ದಕ್ಕೆ ಸಂಗಣ್ಣ ಬೆಂಬಲಿಗರು ಆಕ್ರೋಶಗೊಂಡಿದ್ದು ಕರಡಿ ಸಂಗಣ್ಣ ಮನೆಯಲ್ಲಿ ಸಭೆ ಸೇರಿ, ಚರ್ಚಿಸಲು ಮುಂದಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಬದಲಾಯಿಸಬೇಕು. ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೇನೆ ಟಿಕೆಟ್ ನೀಡಬೇಕು ಅಂತ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಇಂದು ನಡೆಯಲಿರುವ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. ಕರಡಿ ಸಂಗಣ್ಣ ಕಣದಲ್ಲಿ ಇರಲೇಬೇಕು ಅಂತ ಬೆಂಬಲಿಗರು ಆಗ್ರಹಿಸಿದ್ದಾರೆ. ಹೀಗಾಗಿ ಪಕ್ಷದಲ್ಲೇ ಇರಬೇಕಾ, ಬೇಡ್ವಾ, ಸ್ಪರ್ಧಿಸಬೇಕಾ, ಬೇಡ್ವಾ ಅನ್ನೋ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.