ಕೊಪ್ಪಳ: ಮೋದಿ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವ ತಂಗಡಗಿಯ ಪ್ರಚೋದನಾಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ನಿವಾಸದ ಬಳಿ ಬೀಡು ಬಿಟ್ಟ ಕಾರ್ಯಕರ್ತರು, ತಂಗಡಗಿ ಮನೆಗೆ ನೂರಾರು ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಕಮಲ ಪಡೆ ಬೆಂಬಲಿಗರು ಮೋದಿ, ಮೋದಿ ಎಂದು ನರೇಂದ್ರ ಮೋದಿ ಪರ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದಾರೆ. ಜೊತೆಗೆ ಕಾರಟಗಿ- ಕನಕಗಿರಿ ಮುಖ್ಯ ರಸ್ತೆಯಲ್ಲಿ ಕುಳಿತು ಶಿವರಾಜ್ ತಂಗಡಗಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.