ಕೋಲಾರ : ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಅತಿ ಹೆಚ್ಚು ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಕೋಲಾರದ ಬೈರೇಗೌಡ ನಗರದಲ್ಲಿ 2 ದಿನಗಳ ಕಾಲ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಸ್ಪರ್ಧೆಯಲ್ಲಿ ವಿವಿಧ ಕಡೆಗಳಿಂದ ಬಂದಿದ್ದ 25ಕ್ಕೂ ಹೆಚ್ಚು ರೈತರು ತಮ್ಮ ಹಸುಗಳೊಂದಿಗೆ ಉತ್ಸಾಹದಿಂದ ಬಂದು ಎರಡು ದಿನಗಳ ಕಾಲ ಬೆಳಗ್ಗೆ ,ಸಂಜೆ ಸ್ಥಳದಲ್ಲೇ ಹಾಲು ಕರೆಯುವ ಮೂಲಕ ಸ್ಪರ್ದೆಯಲ್ಲಿ ಬಾಗವಹಿಸಿದ್ದು, ನೆಲಮಂಗಲದ ಲಕ್ಷ್ಮೀ ಡೈರಿ ಫಾರಂನ ಭಕ್ತನಪಾಳ್ಯದ ರೈತ ಮುನಿರಾಜು ಎಂಬುವವರ ಎರಡು ಹಸುಗಳು ಅತಿ ಹೆಚ್ಚು ಹಾಲು ಕೊಟ್ಟು ಮೊದಲ ಮತ್ತು ಮೂರನೇ ಸ್ಥಾನ ಪಡೆದುಕೊಂಡರೆ , ಸರ್ಜಾಪುರದ ಯಶೋಧಾ ಶಿವರಾಮರೆಡ್ಡಿ ಅವರ ಹಸು ದ್ವಿತೀಯ ಸ್ಥಾನ ಪಡೆದಿದೆ .
ಮೊದಲ ದಿನ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯ ಸೇರಿ 45 ಕೆಜಿ 250 ಗ್ರಾಂ ಹಾಲು ನೀಡಿದ್ದು, ಎರಡನೇ ದಿನ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯ ಸೇರಿ 48 ಕೆಜಿ 200 ಗ್ರಾಂ ಹಾಲು ನೀಡುವ ಮೂಲಕ ನೆಲಮಂಗಲದ ಲಕ್ಷ್ಮೀ ಡೈರಿ ಫಾರಂನ ಹಸು ಪ್ರಥಮ ಸ್ಥಾನ ಪಡೆದು ಬುಲೆಟ್ ಬೈಕ್ ಬಹುಮಾನ ಗೆದ್ದಿದೆ. ಇವರದೇ ಮತ್ತೊಂದು ಹಸು ಅತಿ ಹೆಚ್ಚು ಹಾಲು ನೀಡಿ ಮೂರನೇ ಸ್ಥಾನ ಪಡೆದು 75 ಸಾವಿರ ರೂಪಾಯಿ ಬಹುಮಾನ ಗಳಿಸಿತು. ಇನ್ನು ಸರ್ಜಾಪುರದ ಯಶೋಧಾ ಶಿವರಾಮರೆಡ್ಡಿ ಅವರ ಹಸು ದ್ವಿತೀಯ ಸ್ಥಾನ ಪಡೆದು 1 ಲಕ್ಷ ರೂಪಾಯಿ , ಹಿಂಡಿಗನಾಳದ ಕನಿಕ್ ಗೌಡರ ಹಸು 4ನೇ ಸ್ಥಾನ 50 ಸಾವಿರ ರೂಪಾಯಿ, ಮತ್ತು ಕೋಲಾರದ ಕುರುಬರಹಳ್ಳಿಯ ಕೃಷ್ಣಪ್ಪ ಅವರ ಹಸು 5ನೇ ಸ್ಥಾನ 25 ಸಾವಿರ ರೂಪಾಯಿ ಬಹುಮಾನ ಪಡೆದುಕೊಂಡವು. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಗೋಪಾಲಕರಿಗೂ ಸಮಾದಾನಕರ ಬಹುಮಾನವಾಗಿ ಹಾಲಿನಕ್ಯಾನ್ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದ ಆಯೋಜಕ ಶಬರೀಶ್ ಮಾತನಾಡಿ, ರಾಜ್ಯ ಮಟ್ಟದ ಪ್ರಥಮ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಹಸುಗಳನ್ನು ತರುವ ಮೂಲಕ ಹೈನುಗಾರರು ತೋರಿದ ಉತ್ಸಾಹ ಪ್ರತಿ ವರ್ಷ ಹಾಲು ಕರೆಯುವ ಸ್ಪರ್ಧೆಯನ್ನು ಮಾಡಬೇಕೆಂಬ ಸಂಕಲ್ಪದ ಸ್ಫೂರ್ತಿ ತಂದಿದೆ, ಪ್ರೇಕ್ಷಕರೂ ಸಹಾ ನಿರೀಕ್ಷೆಗೂ ಮೀರಿ ಭಾಗವಹಿಸುವ ಮೂಲಕ ಸಂಭ್ರಮಪಟ್ಟಿದ್ದು ಸಾರ್ಥಕ ಭಾವ ಮೂಡಿಸಿದೆ ಮುಂದಿನ ವರ್ಷ ಉತ್ತರ ಕರ್ನಾಟಕದಿಂದಲೂ ಹಸುಗಳನ್ನು ಕರೆತರಲು ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಗೆ ಸರಿಯಾದ ಪ್ರೋತ್ಸಾಹ ಇಲ್ಲದೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಮತ್ತಷ್ಟು ಉತ್ಸಹ ತುಂಬುವ ನಿಟ್ಟಿನಲ್ಲಿ ಇಂತಹ ಆರೋಗ್ಯಕರ ಸ್ಪರ್ದೆಗಳು ನಡೆಯಬೇಕಿದ್ದು , ರೈತರ ಕಾರ್ಯಕ್ಕೆ ಹುರುಪು – ಉತ್ಸಹ ತುಂಬುವ ಕೆಲಸ ಸ್ವಾಗತಾರ್ಹವಾಗಿದೆ.