ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಅಧಿಕಾರಿ ಏಡುಕೊಂಡಲು ಅಕ್ರಮವಾಗಿ ರೈತರನ್ನು ವಕ್ಕಲೆಬ್ಬಿಸಿ ಒಂದು ಲಕ್ಷದ ಮೂವತ್ತು ಸಾವಿರ ಮರಗಳ ಮಾರಣಹೋಮ ನಡೆಸಿ, ಕೋರ್ಟ್ ನಿಂದ ಸಹ ಚೀಮಾರಿ ಹಾಕಿಸಿಕೊಂಡಿದ್ದಾರೆ. ಅಂತಹ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದ್ದಾರೆ.
ಅರಣ್ಯ ಭೂಮಿ ಎಂದು ಸರ್ಕಾರದಿಂದಲೇ ರೈತರಿಗೆ ಹಕ್ಕು ಪತ್ರ ನೀಡಲಾಗಿದ್ದ ಭೂಮಿಯಲ್ಲಿ ನೂರಾರು ರೈತರು ಮಾವು ತೆಂಗು ಹುಣಸೆ ಮರಗಳನ್ನು ಹತ್ತಾರುವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದು, ಮರಗಳು ಉತ್ತಮ ಫಸಲು ನೀಡುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಅರಣ್ಯ ಅಧಿಕಾರಿ ಏಡುಕೊಂಡಲು ರಾತ್ರೋರಾತ್ರಿ ಹತ್ತಾರು ಜೆಸಿಬಿ ಗಳನ್ನು ತಂದು ಮಕ್ಕಳಂತೆ ಸಾಕಿದ್ದ ಮರಗಳನ್ನು ಕಡಿದು ಹಾಳುಮಾಡಿದ್ದೀರಿ ನಿಮಗೆ ಮನುಷ್ಯತ್ವ ಇದೆಯೇ ? ಎಂದು ಪ್ರಶ್ನಿಸಿ ರೈತರು ಕೋಲಾರ ಜಿಲ್ಲಾಧಿಕಾರಿ ಕಛೇರಿ ಬಳಿ ಸೇರಿ ಅಧಿಕಾರಿಗಳ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಹರಿಹರ ಪ್ರಿಯ ಅರಣ್ಯ ಅಧಿಕಾರಿ ವಿರುದ್ದ ಕೆಂಡ ಕಾರಿದ್ದು, ಸರ್ಕಾರ ಈ ವಿಷಯವಾಗಿ ಕ್ರಮ ಕೈಗೊಳ್ಳದಿದ್ದರೆ ತಾನು ಪಡೆದಿರುವ ರಾಜ್ಯ ಪ್ರಶಸ್ತಿ ಯನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತೇನೆ, ಜೊತೆಗೆ ಕ್ರಮ ಕೈಗೊಳ್ಳುವವರೆಗೂ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಹಿರಿಯ ವಕೀಲರಾದ ಶಿವಪ್ರಕಾಶ್ ಮಾತನಾಡಿ ಬ್ರಿಟಿಷ್ ರ ಕಾಲಾನಂತರದಲ್ಲಿ ರೈತಿರಿಗಾಗಿ ಹಲವಾರು ಭೂಸುಧಾರಣಾ ಕಾನೂನುಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಭೂಮಾತೆಗೆ ದುಡಿಯುವ ಭೂರಹಿತ ರೈತರಿಗೆ ಭೂಮಿ ನೀಡಲಾಗಿದ್ದು ಸರ್ಕಾರಿ ಅಧಿಕಾರಿಗಳೆ ನೀಡಿದ ದಾಖಲೆಗಳನ್ನು ದಿಕ್ಕರಿಸಿ ಇಂದು ಏಕಾ ಏಕಿ ಮರಗಳನ್ನು ಕಡಿದು ಉದ್ದಟತನ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ