ಕೊಡಗು : ಗಾಂಜಾ ದಾಸರಿಂದ ಬೆಚ್ಚಿಬಿದ್ದಿದ್ದ ಕುಶಾಲನಗರ ವ್ಯಾಪ್ತಿಯಲ್ಲಿನ ಗಾಂಜಾ ದಾಸರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಸಮೀಪ ತೆಪ್ಪದ ಕಂಡಿಯಂಬಲ್ಲಿ ಅಕ್ರಮವಾಗಿ ಗಾಂಜವನ್ನು ಸಂಗ್ರಹಿಸಿಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ದೊಡ್ಡ ಹೊಸೂರು ಗ್ರಾಮದ ನಿವಾಸಿ ಬಸವರಾಜು (37ವರ್ಷ)ಬಂಧಿತ ಆರೋಪಿಯಾಗಿದ್ದು 245 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಪೋಲೀಸರ ವಿಚಾರಣೆ ವೇಳೆ ತನ್ನ ಸಂಪರ್ಕ ಜಾಲದ ಬಗ್ಗೆ ಬಾಯಿ ಬಿಟ್ಟಿರುವ ಆರೋಪಿ,ಪ್ರಭಾವಿಗಳ ಹೆಸರು ಕೂಡ ಹೇಳಿದ್ದಾನೆ. ಪಿರಿಯಾಪಟ್ಟಣ ತಾಲೂಕು ದೊಡ್ಡ ಹೊಸೂರು ಗ್ರಾಮದಲ್ಲಿರುವ ಮನೆಯ ಶೌಚಾಲಯದ ಹಿಂಭಾಗದಲ್ಲಿ ಮಣ್ಣಿನ ಅಡಿಯಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ಜಿಲ್ಲಾ ಪೊಲೀಸ್ ಘಟಕದಲ್ಲಿ ಮಾದಕ ದ್ರವ್ಯ ಪತ್ತೆ ಪರಿಣತಿ ಹೊಂದಿರುವ ಶ್ವಾನ “ಕಾಪರ್ ” ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಕಾಪರ್ ಅನ್ನೋ ಸ್ವಾನದ ತರಬೇತಿದಾರರಾದ ಮನಮೋಹನ್ ಬಿ.ಪಿ, ಸೋಮವಾರಪೇಟೆ ಡಿವೈಎಸ್ಪಿ ಆರ್. ವಿ ಗಂಗಾಧರಪ್ಪ, ಕುಶಾಲನಗರ ವೃತ್ತದ ಸಿಪಿಐ ರಾಜೇಶ್ ಕೆ, ಪಿ.ಎಸ..ಐ ಮೋಹನ್ ರಾಜು, ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.