ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ಅಂದರೆ ಅದು ಕೆಎಂಎಫ್, ಕೇವಲ ದೇಶ ಮಾತ್ರವಲ್ಲ ವಿದೇಶದಲ್ಲೂ ಕೂಡ ಹಾಲು ಮಾರಾಟದಲ್ಲಿ ಮೈಲಿಗಲ್ಲು ಸಾಧಿಸಿದೆ. ಇತ್ತೀಚೆಗೆ ಖಾಸಗಿ ಹಾಲು ಕಂಪನಿಗಳಿಗೆ ಪೈಪೊಟಿ ಕೊಡುತ್ತಿದೆ. ಹಾಲು, ಮೊಸರು, ತುಪ್ಪ, ನಂದಿನಿ ಉತ್ಪನ್ನಗಳು ಎಲ್ಲಡೆ ಉತ್ತಮ ಬೇಡಿಕೆ ಇದೆ. ಕಳೆದ ಕೆಲ ವರ್ಷಗಳ ಹಿಂದೆ ಎಮ್ಮೆ ಹಾಲಿಗೂ ತುಂಬಾ ಬೇಡಿಕೆಗೆ ತಕ್ಕಂತೆ ಗ್ರಾಹಕರಿಗೆ ಎಮ್ಮೆ ಹಾಲು ವಿತರಣೆ ಮಾಡುತ್ತಿದ್ದ ಕೆಎಂಎಫ್ ಇದೀಗ ದಿಢೀರ್ ಅಂತಾ ಎಮ್ಮೆ ಹಾಲು ಮಾರಾಟ ಸ್ಥಗಿತ ಮಾಡಲು ಗಂಭೀರ ಚಿಂತನೆ ಮಾಡಿದೆ.
ಎಮ್ಮೆ ಹಾಲು ಪ್ರತಿ ಲೀಟರ್ಗೆ 60 ರೂಪಾಯಿ ನಿಗದಿ ಮಾಡಿರುವ ರಾಜ್ಯದಲ್ಲಿ ಎಮ್ಮೆ ಹಾಲಿನ ಮಾರಾಟ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಇಲ್ಲದ ಕಾರಣ ರಾಜ್ಯಾದ್ಯಂತ ಎಮ್ಮೆ ಹಾಲು ಮಾರಾಟವನ್ನ ಸಂಪೂರ್ಣ ಸ್ಥಗಿತಗೊಳಿಸಲು ಕೆಎಂಎಫ್ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಕಳೆದ ಡಿಸೆಂಬರ್ 21 ರಿಂದ ಎಮ್ಮೆ ಹಾಲು ಮಾರಾಟಕ್ಕೆ ಚಾಲನೆ ಕೊಡಲಾಗಿತ್ತು. ಆದ್ರೆ ಚಾಲನೆ ಕೊಟ್ಟು 3 ತಿಂಗಳಲ್ಲಿ ಗ್ರಾಹಕರಿಂದ ನಿರಾಸಕ್ತಿ ಕಂಡು ಬಂದ ಕಾರಣ ಎಮ್ಮೆ ಹಾಲು ಮಾರಾಟವನ್ನ ಕೆಎಂಎಫ್ ನಿಲ್ಲಿಸಲು ಮುಂದಾಗಿದೆ.
ರಾಜ್ಯದಲ್ಲಿ ನಿತ್ಯ 2000 ಲೀಟರ್ ಮಾತ್ರ ಎಮ್ಮೆ ಹಾಲು ಮಾರಾಟವಾಗ್ತಿದೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಭಾಗಕ್ಕೆ ಪೂರೈಕೆಯಾಗುತ್ತಿದ್ದ ಎಮ್ಮೆ ಹಾಲು ಮಾರಾಟವನ್ನ ನಿಲ್ಲಿಸಲಾಗುತ್ತಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮಾಹಿತಿ ಕೊಟ್ಟಿದ್ದಾರೆ.