ರಾಜಕೀಯರಾಜ್ಯಸುದ್ದಿ

ನಮ್ಮ ಗ್ಯಾರಂಟಿ ರೈತರಿಗೆ; ಚುನಾವಣೆ ಗಿಮಿಕ್‌ ಅಲ್ಲ

ಕಲಬುರಗಿ; ರಾಜಕಾರಣದಲ್ಲಿ ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕಿಂತ ದೊಡ್ಡ ತೃಪ್ತಿ ಬೇರೊಂದಿಲ್ಲ. ಮಾರ್ಚ್ 10ಕ್ಕೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾಲ್ಕು ವರ್ಷ ಪೂರ್ಣಗೊಂಡಿದೆ. ಬೆಳಗಾವಿಯಲ್ಲಿ ಪ್ರಜಾಧ್ವನಿ ಪ್ರಾರಂಭಿಸಿದ ನಂತರ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಜೆಟ್ ನಲ್ಲಿ ಇದಕ್ಕಾಗಿ 52 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ.

ನಮ್ಮ ಗ್ಯಾರಂಟಿ ಯೋಜನೆಗಳನ್ನು ದೇಶದಲ್ಲಿ ಜನ ಮೆಚ್ಚಿದ್ದಾರೆ. ಬಿಜೆಪಿಯವರು ಒಪ್ಪಿ ಮೋದಿ ಗ್ಯಾರಂಟಿ ಯೋಜನೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.ಮತದಾರರು ಹಾಗೂ ಕಾಂಗ್ರೆಸ್ ನಾಯಕರು ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ನಾವು ನಾಯಕರು ನೆಪ ಮಾತ್ರ. ನಾವು ಪ್ರತಿ ತಾಲೂಕು, ಜಿಲ್ಲೆಗಳಲ್ಲಿ 15 ಕಾರ್ಯಕರ್ತರನ್ನು ಒಳಗೊಂಡಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಲಾಗಿದೆ.

ನಾವು ಚುನಾವಣೆಗಾಗಿ ಗ್ಯಾರಂಟಿ ಯೋಜನೆ ನೀಡುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ನೆರವು ನೀಡಲು ಜಾರಿ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕರಿಂದ ಬಸ್ ಪ್ರಯಾಣಕ್ಕೆ ಮೂರು ಪಟ್ಟು ಹಣ ಕೀಳಲು ಮುಂದಾದರು. ಆಗ ನಾನು ಸಿದ್ದರಾಮಯ್ಯ ಅವರು ಚರ್ಚೆ ಮಾಡಿ ಸರ್ಕಾರಕ್ಕೆ 1 ಕೋಟಿ ರೂಪಾಯಿ ಚೆಕ್ ನೀಡಿ ಆ ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ತಲುಪಿಸಲು ಆಗ್ರಹಿಸಿದೆವು. ನಂತರ ಸರ್ಕಾರ ವಿಧಿ ಇಲ್ಲದೆ ಒಂದು ವಾರ ಉಚಿತ ಬಸ್ ಪ್ರಯಾಣ ಕಲ್ಪಿಸಿತು. ಕೇಂದ್ರ ಸರ್ಕಾರ ಉಚಿತ ರೈಲು ಸೇವೆ ಆರಂಭಿಸಿತು.

ಈ ರೀತಿ ಜನರ ಕಷ್ಟಗಳಿಗೆ ಸ್ಪಂದಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ನಮಗೆ ಮತ ಮುಖ್ಯ ಅಲ್ಲ. ನಾವು ಬ್ಯಾಂಕುಗಳ ರಾಷ್ಟ್ರೀಕರಣ, ಅನ್ನಭಾಗ್ಯ, ಉಳುವವನಿಗೆ ಭೂಮಿ, ಬಡವರಿಗೆ ಮನೆ, ನಿವೇಶನ ನೀಡಿದ್ದೇವೆ. ನಮ್ಮ ಯೋಜನೆಗಳು ಯಾವುದೇ ಒಂದು ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗದ ಜನರಿಗೆ ನೀಡಲಾಗುವುದು.

ನೀರಿನ ಅಭಾವ ನೀಗಿಸುತ್ತೇವೆ-ಡಿಕೆಶಿ

ಬರ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ 7 ಸಾವಿರ ಕೊಳವೆ ಬಾವಿಗಳು ಬತ್ತಿದ್ದು ಇದರಿಂದ ಕೆಲವು ಕಡೆ ನೀರಿನ ಅಭಾವ ಎದುರಾಗಿದೆ. ಉಳಿದ ಕಡೆ ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ರಾಜ್ಯದ ಇತರೆ ಭಾಗಗಳಲ್ಲಿ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಅವರಿಗೆ ಹಣ ನೀಡಲಾಗಿದೆ. ನೀರಿನ ಅಭಾವದ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರು ಸಭೆ ಮಾಡಿ ಚರ್ಚಿಸುತ್ತಿದ್ದಾರೆ. ಮುಂದಿನ ಎರಡು ಮೂರು ತಿಂಗಳು ನೀರಿನ ಅಭಾವ ಸೃಷ್ಟಿಯಾಗಿದ್ದು, ಎಲ್ಲೆಲ್ಲಿಂದ ನೀರನ್ನು ಪೂರೈಸಬಹುದು ಎಂದು ಗುರುತಿಸಿ ಟ್ಯಾಂಕರ್ ಗಳ ಮೂಲಕ ಪೂರೈಸಲಾಗುವುದು ಎಂದರು..

20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಕೇಳಿದಾಗ, “ನಾವು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ ಪಕ್ಷದಿಂದ 10ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಕಾರಣ ಆ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಕೆಲಸ ಮಾಡಿಲ್ಲ, ಜನರಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ಜನ ಬೇಸರವಾಗಿದ್ದಾರೆ ಎಂದು ಬೇರೆಯವರನ್ನು ನಿಲ್ಲಿಸುತ್ತಿದ್ದಾರೆ” ಎಂದು ಹೇಳಿದರು..

Comments (0)

Your email address will not be published. Required fields are marked *

Back to top button