ಜೈಪುರ : ರಾಮನಾಮ ಜಪಿಸೋದು, ಸಾರ್ವಜನಿಕ ಆಸ್ತಿ ಲಪಟಾಯಿಸುವುದು ಪ್ರಧಾನಿ ಮೋದಿ ಅಜೆಂಡಾ ಎಂಬುದಾಗಿ ಪ್ರಧಾನಿ ವಿರುದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ರಾಜಸ್ಥಾನದ ವಾಘಡನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ವಾಧಿಕಾರ ಧೋರಣೆಯನ್ನು ಖಂಡಿಸಿದರು. ರಾಮನಾಮ ಜಪನಾ, ಪರಾಯ ಮಾಲ್ ಅಪನಾ ಎನ್ನುವಂತೆ ವರ್ತಿಸುವ ಮೋದಿ ಒಂದೆಡೆ ರಾಮನಾಮ ಜಪಿಸುತ್ತಾ ಇನ್ನೊಂದೆಡೆ ಏರಪೋರ್ಟ, ರೈಲ್ವೆ ಸೇರಿದಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಗಳನ್ನು ಶ್ರೀಮಂತರಿಗೆ ಮಾರಾಟ ಮಾಡಿದ್ದಾರೆ. ಸಾರ್ವಜನಿಕ ಆಸ್ತಿಯ ಲೂಟಿಯೇ ಅವರ ದೊಡ್ಡ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ರಾಮಮಂದಿರ, ನೂತನ ಸಂಸತ್ ಭವನ ಉದ್ಘಾಟನೆ, ಹಾಗೂ ಶಂಕು ಸ್ಥಾಪನೆ ವೇಳೆ ರಾಷ್ಟ್ರಪತಿ ಸ್ಥಾನಕ್ಕೆ ಪ್ರಧಾನಿ ಮೋದಿ ಅಗೌರವ ತೋರಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ದಲಿತರು ಎನ್ನುವ ಕಾರಣಕ್ಕೆ ಅವರನ್ನು ಕಡೆಗಣಿಸಿದ್ದರು. ಸಂಸತ್ ಭವನ ಶಂಕುಸ್ಥಾಪನೆ ವೇಳೆ ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ್ ಅವರನ್ನು ಸಹ ಕಡೆಗಣಿಸಿದ್ದರು. ದಲಿತರು ಬಂದರೆ ಅಪವಿತ್ರವಾಗುತ್ತೆ ಅಂತಾ ಕಡೆಗಣಿಸಿದ್ದರು.
ಪ್ರಧಾನಿ ಮೋದಿಯವರಿಗೆ ಕೇವಲ ಆರ್.ಎಸ್.ಎಸ್ ಬಗ್ಗೆ ಬಿಜೆಪಿ ನಾಯಕರ, ಮತ್ತು ಶ್ರೀಮಂತರ ಕಲ್ಯಾಣದ ಬಗ್ಗೆ ಮಾತ್ರ ಚಿಂತನೆ ಇದೆ. ದಲಿತರ ಬಗ್ಗೆ, ಶೋಷಿತರು, ಮಹಿಳೆಯರು, ನಿರುದ್ಯೋಗಿ ಯುವಕ, ಯುವತಿಯರು ಯೋಗಕ್ಷೇಮದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ . ಇವರನ್ನು ಬೆಂಬಲಿಸಿದರೆ, ದಲಿತರು, ಮಹಿಳೆಯರು, ಶೋಷಿತರು, ಶಿಕ್ಷಣ ಪಡೆಯಲು, ಉದ್ಯೋಗ ಮಾಡಲು, ಮುಂದೆ ಬರಲು ಸಾಧ್ಯವಿಲ್ಲ. ಆದ್ದರಿಂದ ಮೋದಿ ಬೆಂಬಲಿಸುವ ಮುಂಚೆ ಬಹಳಷ್ಟು ಯೋಚಿಸಬೇಕೆಂದು ಅವರು ಎಚ್ಚರಿಸಿದರು.
ಈ ವೇಳೆ ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ ಇನ್ನಿತರ ನಾಯಕರು ಉಪಸ್ಥಿತರಿದ್ದರು.