ಹುಬ್ಬಳ್ಳಿ ; ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಇಲಾಖೆಯ ಮಂತ್ರಿಯವರು ನೀಡಬೇಕಾದ ಅನುಮತಿಯನ್ನು ಈಗ ರದ್ದು ಮಾಡಿದ್ದು, ಕೇಂದ್ರ ಮಂತ್ರಿ ಭೂಪೇಂದ್ರ ಯಾದವರ ಈ ನಡೆಯಿಂದ ನಮ್ಮ ನೋವಾಗಿದೆ ಎಂದು ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಇಲಾಖೆ ಮಂತ್ರಿಯವರು ಟೈಗರ್ ಕಾರಿಡಾರ್ ಅನುಮತಿ ನೀಡಬೇಕಾಗಿತ್ತು. ಆದರೆ ಈಗ ಅವರು ನ್ಯಾಯಾಲಯದ ನೆಪ ಹೇಳಿ ಕಳೆದ ಜನೆವರಿ 30 ರದ್ದು ಮಾಡಿದ್ದಾರೆ. ಇದರಿಂದ ನಮ್ಮಗೆ ತುಂಬಾ ನೋವಾಗಿದೆ. ಗೋವಾದ ಇಬ್ಬರು ಎಂಪಿಗಳ ಮಾತು ಕಟ್ಟಿಕೊಂಡು ಭೂಪೇಂದ್ರ ಅವರು ನಮ್ಮಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯದ 28 ಎಂಪಿಗಳು ನಮ್ಮ ರಾಜ್ಯಕ್ಕೆ ನ್ಯಾಯ ಕೊಡಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹದಾಯಿ ಮಧ್ಯಂತರ ತೀರ್ಪು ಬಂದು ಆರು ವರ್ಷ ಕಳೆಯುತ್ತಾ ಬಂದಿದೆ. 2018 ರಲ್ಲಿಯೇ ನೀರು ಹಂಚಿಕೆಯಾಗಿದೆ. ಕಳೆದ 2019 ರಲ್ಲಿ ಗೆಜೆಟ್ ನೋಟಿಫಿಕೇಶನ್ ಆಗಿದೆ. ಆದರೆ ಇದೂವರೆಗೂ ರಾಜ್ಯ ಎಂಪಿಗಳು ಕೇಂದ್ರದಲ್ಲಿ ಇದ್ದುಕೊಂಡು ಯೋಜನೆ ಅನುಷ್ಠಾನ ಮಾಡುವುದಕ್ಕೆ ಆಗುತ್ತಿಲ್ಲ. ಇದೂ ರಾಜ್ಯ ಎಂಪಿಗಳಿಗೆ ನಾಚಿಕೆ ಬರಬೇಕು. ಜನಪ್ರತಿನಿಧಿಗಳ ನಿರ್ಧರಕ್ಕೆ ಬೇಸತ್ತು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೃಷಿಗಾಗಿ ಡ್ಯಾಂ ಕಟ್ಟಿದ್ದಾರೆ. ಡಿಪಿಆರ್ ನಲ್ಲೂ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಇದೀಗ ಮಲಪ್ರಭಾ ನೀರನ್ನು ಕುಡಿಯಲು ಬಿಡಲಾಗುತ್ತಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅದರಿಂದ ಬರುವ ತೆರಿಗೆಯನ್ನು ಅಚ್ಚಕಟ್ಟಿನ ಜನರಿಗೆ ಕೊಡಬೇಕು. ಈ ಬಗ್ಗೆ ಕಾನೂನು ಹೋರಾಟ ಮಾಡತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಹದಾಯಿ ಯೋಜನೆಯನ್ನು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಜತೆಗೆ ಮಲಪ್ರಭಾ ನದಿಯ ನೀರಿನಿಂದ ವಸೂಲಿ ಮಾಡಲಾದ ತೆರಿಗೆ ಹಣವನ್ನು ಮಲಪ್ರಭಾ ಅಚ್ಚುಕಟ್ಟಿನ ಜನರಿಗೆ ವಿತರಣೆ ಮಾಡಬೇಕು, ಈ ಬಗ್ಗೆ ಹೈಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು. ಈಗಾಗಲೇ ಮಹದಾಯಿ ಯೋಜನೆ ಅನುಷ್ಟಾನಕ್ಕೆ ರೈತರು ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಮಾತ್ರ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಕುಟುಕಿದರು.