ಹುಬ್ಬಳ್ಳಿ: ಬಿಜೆಪಿ ವರಿಷ್ಠ ಅಮಿತ್ ಷಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿಲ್ಲ. ಕುರುಬ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಲು ವಿರೋಧಿಗಳು ಹೂಡಿದ ತಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಕಾರ್ಯಕರ್ತರೊಬ್ಬರು “ಅಮಿತ್ ಶಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದಾರೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನುತ್ತಿದ್ದಂತೆ ಸಚಿವ ಜೋಶಿ ಅಚ್ಚರಿ ವ್ಯಕ್ತಪಡಿಸಿದರು. ಅಮಿತ್ ಶಾ ಅವರು ಯಾವ ಸಭೆಯಲ್ಲೂ ಹಾಗೆ ಹೇಳಿಲ್ಲ. ಅದೆಲ್ಲ ಸುಳ್ಳು. ನಾನೂ ಆ ಸಭೆಯಲ್ಲಿ ಇದ್ದೆ. ಚಾಲೆಂಜ್ ಮಾಡಿ ಹೇಳುತ್ತೇನೆ. ಅವರು ಹಾಗೆ ಹೇಳಿಯೇ ಇಲ್ಲವೆಂದು ಸ್ಪಷ್ಟಪಡಿಸಿದರು.
ಕುರುಬ ಸಮುದಾಯದವರು ಸದಾ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಈಗ ಆ ಸಮುದಾಯದವರೇ ಸಿಎಂ ಇದ್ದಾರೆ. ಸಹಜವಾಗಿ ತಮ್ಮ ಸಮಾಜದವರನ್ನು ಸೆಳೆಯಲು ಯತ್ನಿಸಬಹುದು. ಬಿಜೆಪಿ ಬೆಂಬಲಿತ ಆ ಸಮುದಾಯವನ್ನು ಬಿಟ್ಟುಕೊಡಬೇಡಿ ಎಂದು ಅಮಿತ್ ಷಾ ನಮಗೆ ಸಲಹೆ ಮಾಡಿದರು. ಇದು ಸತ್ಯ ಸಂಗತಿ. ಮಿಕ್ಕಿದ್ದೆಲ್ಲ ಮಿತ್ಯ ಎಂದು ಜೋಶಿ ಸಮಾಜಯಿಷಿ ನೀಡಿದರು.
ಕುರುಬ ಸಮಾಜದ ಕೆಲವರು ಸಿಎಂ ಅವರತ್ತ ಹೋಗಬಹುದು. ಅವರನ್ನೂ ಬಿಜೆಪಿಯಲ್ಲೇ ಉಳಿಸಿಕೊಳ್ಳಿ. ಇದು ಹಿಂದೂ ಸಮಾಜದ ಉಳಿವಿನ ಪ್ರಶ್ನೆ. ಹಿಂದೂ ಸಮಾಜದ ಒಂದು ಭಾಗವಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ ಎಂದು ಹೇಳಿದ್ದಾರೆ. ಅವರು ಅಲ್ಲಿ ಹೇಳಿದ್ದನ್ನೇ ನಾನಿಲ್ಲಿ ನಿಮ್ಮೆದುರು ಹೇಳುತ್ತಿದ್ದೇನೆ. ಇದೇ ಸತ್ಯ ಸಂಗತಿ ಎಂದು ಹೇಳಿದರು.
ಕುರುಬ ಸಮುದಾಯವನ್ನು ಬಿಜೆಪಿಯಿಂದ ಬೇರ್ಪಡಿಸಲು ಯತ್ನ: ವಿರೋಧಿಗಳು ಕುರುಬ ಸಮುದಾಯವನ್ನು ಬಿಜೆಪಿಯಿಂದ ಮುದ್ದಾಂ ಬೇರ್ಪಡಿಸಬೇಕೆಂದು ಹೀಗೆ ಏನೆಲ್ಲಾ ಶತಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಯಾರೂ ಕಿವಿಗೊಡಬೇಡಿ ಎಂದು ಕರೆ ನೀಡಿದರು.
ನಾನು-ಬೊಮ್ಮಾಯಿ ಜತೆಗಿದ್ದೇವೆ: ಯಾರೇನೇ ಹೇಳಲಿ, ನಾನು ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಾವತ್ತೂ ನಿಮ್ಮ ಜತೆಗಿದ್ದೇವೆ. ಅನ್ಯರು ಹರಿ ಬಿಡುವ ವದಂತಿಗಳನ್ನು ನಂಬಬೇಡಿ ಎಂದು ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.