ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರ ನಗರದಲ್ಲಿ ಕಸದ ರಾಶಿ ಕಾಣುತ್ತಿರುವುದನ್ನು ಖಂಡಿಸಿ ಹಾಗೂ ಸ್ವಚ್ಚತೆಗಾಗಿ ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ನೇತೃತ್ವದಲ್ಲಿ, ಹುಬ್ಬಳ್ಳಿಯ ನಗರದ ಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪಾಲಿಕೆ ಅಧಿಕಾರಿ ಒಬ್ಬರು ಮನವಿ ಸ್ವೀಕರಿಸಲು ಬಂದರು ವಿದ್ಯಾರ್ಥಿಗಳು ಮಾತ್ರ ತಮ್ಮಪಟ್ಟು ಸಡಿಲಿಸದೆ, ಪಾಲಿಕೆ ಮೇಯರ್ ಅಥವಾ ಆಯುಕ್ತರ ಆಗಮನಕ್ಕೆ ಪಟ್ಟುಹಿಡಿದರು.
ಇನ್ನೂ ಈ ವೇಳೆ ಪೊಲೀಸರ ಮತ್ತು ವಿದ್ಯಾರ್ಥಿಗಳ ಮಧ್ಯ ಮಾತಿನ ಚಕಮಕಿ ನಡೆಯಿತು. ಪಾಲಿಕೆ ಆಯುಕ್ತರು ಹಾಗೂ ಮೇಯರ್ ಅವರು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ವಿದ್ಯಾರ್ಥಿಗಳು ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನೂಕಾಟ ತಳ್ಳಾಟ ಏರ್ಪಟ್ಟಿತ್ತು. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಪಾಲಿಕೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅವಳಿನಗರದಲ್ಲಿ ಎಲ್ಲಿ ನೋಡಿದರು. ಕಸದ ರಾಶಿ ಕಾಣುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದೂಳಿನಿಂದ ಸಾರ್ವಜನಿಕರು ನಗರದಲ್ಲಿ ಮಾಸಕ ಹಾಕಿಕೊಂಡು ಓಡಾಡ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಈ ಕೂಡಲೇ ಅವಳಿ ನಗರದಲ್ಲಿ ಸ್ವಚ್ಚತೆ ಕಾಪಾಡಬೇಕು, ಕಸ ಮುಕ್ತ ವಾತಾವರಣ ನಿರ್ಮಿಸಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಾವು ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.