ಹುಬ್ಬಳ್ಳಿ: ಬಸವರಾಜ್ ಬೊಮ್ಮಾಯಿ ಟಿಕೆಟ್ ಬದಲಿಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆಂದು ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಸ್ವಪಕ್ಷದ ಹೈಕಮಾಡ ನಾಯಕರಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರ ಸರ್ಕಾರದಿಂದ ಹಾಗೂ ಯಡಿಯೂರಪ್ಪ ಸರ್ಕಾರದಿಂದ ಯಾವ ಯಾವ ಮಂತ್ರಿಗಳು ಹೈಕಮಾಂಡಿಗೆ ಎಷ್ಟು ಎಷ್ಟು ದುಡ್ಡು ಕೊಟ್ಟಿದ್ದಾರೆ, ಎಂದು ಈಶ್ವರಪ್ಪನವರ ಬಳಿ ಹಾಗೂ ನಮ್ಮ ಬಳಿ ಮಾಹಿತಿ ಇದೆ. ಸಂದರ್ಭ ಬಂದಾಗ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡುತ್ತೇವೆಂದರು.
ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ. ಯಾವೊಬ್ಬ ಕುರುಬರಿಗೂ ಈ ರಾಜ್ಯದಲ್ಲಿ ಪ್ರಾಧಾನ್ಯತೆ ಕೊಡದೆ ಇರುವುದು ಖಂಡನೀಯ. ಆದ್ದರಿಂದ ನಮ್ಮ ಸಮುದಾಯ ಸಿದ್ದರಾಮಯ್ಯ ಅವರನ್ನು ನಾಯಕ ಎಂದು ಗುರುತಿಸಿಕೊಂಡಿದೆ. ಇದನ್ನು ತಪ್ಪಿಸುವ ಪ್ರಾಮಾಣಿಕ ಕೆಲಸ ಬಿಜೆಪಿ ಹೈಕಮಾಂಡ್ ನಿಂದ ಆಗದೆ ಇರುವುದು ದುರ್ದೈವ ಹಾಗೂ ಉದ್ದೇಶಪೂರ್ವಕ ಎಂಬುದು ವ್ಯಕ್ತವಾಗುತ್ತಿದೆ ಎಂದು ದೂರಿದರು.
೨೮ ಲೋಕಸಭಾ ಕ್ಷೇತ್ರಗಳಲ್ಲಿ ಒಬ್ಬರಿಗೆ ಒಂದು ಟಿಕೆಟ್ ಕೊಡಲು ಸಾಧ್ಯವಿಲ್ಲವೆಂದರೆ. ಈ ಸಮುದಾಯವನ್ನು ಕೇಂದ್ರ ಬಿಜೆಪಿ ಹೈಕಮಾಂಡ್ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು ಖಂಡನೀಯವಾಗಿದೆ. ಜೊತೆಗೆ ಏಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ೨ ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಆಗಮಿಸಲಿದ್ದಾರೆ. ನನ್ನ ಪರವಾಗಿ ಈಶ್ವರಪ್ಪನವರು ಪ್ರಚಾರಕ್ಕೆ ಬರಲಿದ್ದು, ಸಮಾವೇಶದ ಉದ್ಘಾಟನೆ ಮಾಡಲಿದ್ದಾರೆಂದರು. ಸಮಾವೇಶದಲ್ಲಿ ಸಿನಿಮಾ ಕಲಾವಿದರು, ಉದ್ದಿಮೆಗಳು ಸೇರಿದಂತೆ ಮೊದಲಾದ ಮುಖಂಡರುಗಳು ಆಗಮಿಸಲಿದ್ದಾರೆ. ಅಷ್ಟರೊಳಗೆ ತಪ್ಪುಸರಿಮಾಡುವ ಕೆಲಸವಮ್ನು ಬಿಜೆಪಿ ಹೈಕಮಾಂಡ್ ಮಾಡಬೇಕುಎಂದು ಆಗ್ರಹಿಸಿದರು.