ಹುಬ್ಬಳ್ಳಿ ; ಐತಿಹಾಸಿಕ ಹೋಳಿ ಹುಣ್ಣಿಮೆಯ ರಂಗಪಂಚಮಿ ಹಬ್ಬದ ಸಂಭ್ರಮ ವಾಣಿಜ್ಯ ನಗರಿಯಲ್ಲಿ ಮನೆ ಮಾಡಿತ್ತು. ಹುಬ್ಬಳ್ಳಿಗರು ಕಲರ್ ಕಲರ್ ಬಣ್ಣಗಳಲ್ಲಿ ಮಿಂದೆದ್ದಿದ್ದರು. ರತಿ-ಮನ್ಮಥರ ಮೂರ್ತಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಹೋಳಿದ ರಂಗಪಂಚಮಿಗೆ ಚಾಲನೆ ದೊರೆತಿದ್ದು, ಬಣ್ಣಗಳಲ್ಲಿ ಜನತೆ ಕಲರ್ ಕಲರಾಗಿ ಕಾಣುವ ದೃಶ್ಯಗಳು ಸಾಮಾನ್ಯವಾಗಿದ್ದವು.
ನಗರದ ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಕಮರಿಪೇಟೆ, ದಾಜಿಬಾನಪೇಟೆ, ಬಾನಿ ಓಣಿ, ಮ್ಯಾದಾರ ಓಣಿ, ಮರಾಠ ಗಲ್ಲಿ, ಬಮ್ಮಾಪುರ ಓಣಿ, ಹಳೇ ಹುಬ್ಬಳ್ಳಿ, ಚನ್ನಪೇಟ, ನೇಕಾರ ನಗರ, ನವನಗರ ಮತ್ತಿತರ ಪ್ರದೇಶದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ ಸಂಭ್ರಮ ಮನೆ ಮಾಡಿತ್ತು.
ಹುಣ್ಣಿಮೆ ದಿನದಂದು ನಗರದ ಮ್ಯಾದಾರ ಓಣಿ, ಮರಾಠ ಗಲ್ಲಿ, ಬ್ಯಾಳಿ ಓಣಿ ಇತರೆಡೆ ಒಟ್ಟು 460 ಅಧಿಕ ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕೆಲವೆಡೆ ಹುಣ್ಣಿಮೆ ದಿನದಂದೇ ಈ ಮೂರ್ತಿಗಳನ್ನು ದಹಿಸಿದರೆ, ಬಹಳಷ್ಟು ಮೂರ್ತಿಗಳನ್ನು ರಂಗಪಂಚಮಿ ದಿನವಾಗಿದೆ. ಮೆರವಣಿಗೆ ನಡೆಸಿದ ನಂತರ ದಹಿಸುವ ಪದ್ದತಿ ನಡೆದುಕೊಂಡು ಬಂದಿದ್ದು, ಮೂರ್ತಿಗಳ ಮೆರವಣಿಗೆ ಉದ್ದಕ್ಕೂ ಜನರು ಗುಲಾಲ್ ಆಡಿದರು. ಕುಟುಂಬ ಸಮೇತ ಬಂದು ರತಿ-ಮನ್ಮಥ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಬಹಳಷ್ಟು ಕಡೆಗೆ ಬಣ್ಣದ ಗಡಿಗೆಗಳನ್ನು ಒಡೆದು ಖುಷಿಪಟ್ಟರು.
ಯುವಕ, ಯುತಿಯರು ನಗರದ ವಿವಿಧ ಪ್ರದೇಶದಲ್ಲಿ ಡಿಜೆ ಹಾಡುಗಳಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಸ್ತೆಗಳಲ್ಲಿ ಬಣ್ಣದ ಬ್ಯಾಗಳನ್ನು ಹಿಡಿದು ಬೈಕ್ ಮೇಲೆ ಸುತ್ತಾಡಿ ಎದುರಿಗೆ ಬಂದವರಿಗೆ ಸೇರಿದಂತೆ, ತಮ್ಮ ಆತ್ಮೀಯರಿಗೆ ಬಣ್ಣ ಹಚ್ಚುವ ಮೂಲಕ ಯುವ ಸಮುದಾಯ ರಂಗಪಂಚಮಿಯ ಶುಭಾಶಯಗಳನ್ನು ಕೋರಿದ್ದರು. ಒಟ್ಟಿನಲ್ಲಿ ಶನಿವಾರದಂದು ವಾಣಿಜ್ಯ ನಗರಿ ಹುಬ್ಬಳ್ಳಿ ಬಣ್ಣದ ನಗರಿಯಾಗಿ ಮಾರ್ಪಾಡಗಿದ್ದು ಸುಳ್ಳಲ್ಲ.