ಹುಬ್ಬಳ್ಳಿ : ಪ್ರಸಕ್ತ ರಾಜಕೀಯ ವಿದ್ಯಮಾನಗಳ ನಡುವೆಯೇ ಖಾವಿಧಾರಿಯೊಬ್ಬರು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದ ಹಿನ್ನೆಲೆಯಲ್ಲಿ ನಾಳೆ ಮೂರು ಸಾವಿರಮಠದಲ್ಲಿ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧಿಪತಿಗಳ ಚಿಂತನ ಮಂಥನ ಆಯೋಜನೆ ಮಾಡಲಾಗಿದೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈಗಾಗಲೇ ಸ್ವಾಮೀಜಿಗಳು ಧಾರವಾಡ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರ ಭಕ್ತರಲ್ಲಿ ಮೂಡಿದೆ. ಆದರೆ ಸ್ವಾಮೀಜಿಗಳು ಏಕಮುಖ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸರ್ವರ ಅಭಿಪ್ರಾಯ ಪಡೆದುಕೊಂಡು ನನ್ನ ನಿರ್ಧಾರವನ್ನು ತಿಳಿಸುವುದು ಅವಶ್ಯವಾಗಿದೆ. ಹೀಗಾಗಿ ನಾಡಿನ ಒಳಿತಿಗಾಗಿ ಮಠಾಧಿಪತಿಗಳ ಸಭೆಗೆ ಆಹ್ವಾನಿಸಲಾಗಿದೆ. ನೂರಾರು ಮಠಾಧೀಪತಿಗಳು ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ. ಇದರ ಮೇಲೆ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಬೇಕೋ? ಬೇಡವೋ? ಎಂಬ ಬಗ್ಗೆ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಸಮಸ್ಯೆಗಳು ಬಂದಾಗ ಸ್ವಾಮೀಜಿಗಳು ಧ್ವನಿ ಎತ್ತಿದ ಉದಾಹರಣೆಗಳಿವೆ. ಎಲ್ಲಾ ಮಠಾಧಿಪತಿಗಳು ಅಂತರಂಗದ ಕುರಿತು ಚರ್ಚೆ ಮಾಡಲಾಗುತ್ತದೆ. ಸಭೆಯ ನಂತರ ತೀರ್ಮಾನಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಲಾಗುತ್ತದೆ ಎಂದರು.
ನಾನು ಪಕ್ಷೇತರರವಾಗಿ ಸ್ಪರ್ಧೆ ಮಾಡುವ ವಿಷಯ ಹೇಗೆ ಹುಟ್ಟಿತು ಎನ್ನುವುದು ಯಕ್ಷೆ ಪ್ರಶ್ನೆಯಾಗಿದೆ. ಊಹಾಪೋಹಗಳಿಗೆ ಏಕಕಾಲದಲ್ಲಿ ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ. ನಾನು ಸ್ಪರ್ಧೆ ಮಾಡುವ ನಿಲುವುವನ್ನ ನಾಳೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಚುನಾವಣೆ ಸ್ಪರ್ಧೆ ಮಾಡುವ ಯೋಚನೆ ನನ್ನ ಮುಂದೆ ಇಲ್ಲ. ಮಾಧ್ಯಮಗಳ ಮೂಲಕ ರಾಜ್ಯದ ಎಲ್ಲಾ ಸ್ವಾಮೀಜಿಗಳಿಗೆ ಆಹ್ವಾನ ನೀಡುತ್ತಿದ್ದೇವೆ. ನಾಳೆ ಆಂತರಿಕ ಸಭೆ ನಡೆಸಲಾಗುತ್ತದೆ. ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಸ್ವಾಮೀಜಿಗಳಿಗೆ ಇರುವುದಿಲ್ಲ, ಈಗಾಗಿ ನಾಳೆ ಸಭೆ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ದಿಂಗಾಲೇಶ್ವರ ಶ್ರೀಗಳು ವ್ಯಕ್ತಪಡಿಸಿದರು.