ಹುಬ್ಬಳ್ಳಿ: ಪತ್ರಕರ್ತರನ್ನು ಹೀನಾಯ ಶಬ್ದಗಳಿಂದ ನಿಂದಿಸಿದ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆ ವಿರೋಧಿಸಿ ಹಾಗೂ ಕಾಂಗ್ರೆಸ್ ರಾಜ್ಯ ಸಭೆ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಪತ್ರಕರ್ತರ ಜೊತೆಗೆ ಅನುಚಿತವಾಗಿ ವರ್ತಿಸಿದ್ದನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ಪತ್ರಕರ್ತರು ಆಕ್ರೋಶ ಹೊರಹಾಕಿದರು.
ನಗರದ ತಹಶಿಲ್ದಾರ ಕಚೇರಿ ಆವರಣದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಸಂಸದ ಅನಂತಕುಮಾರ ಹೆಗಡೆ ಸೇರಿ ರಾಜ್ಯ ಸಭಾ ಸದಸ್ಯ ನಾಸೀರ ಹುಸೇನ್ ವಿರುದ್ಧ ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಗುರುತಿಸಿಕೊಂಡಿರುವ ಮಾಧ್ಯಮ ಪ್ರತಿನಿಧಿಗಳ ಮೇಲೆ ಇತ್ತೀಚೆಗೆ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯ ನಾಸೀರ ಹುಸೇನ್ ತೀವ್ರ ಕೆಳಮಟ್ಟದಲ್ಲಿ ಕಾಣುತ್ತಿದ್ದಾರೆ. ಈ ರೀತಿಯ ದೌರ್ಜನ್ಯಗಳು ಇತ್ತೀಚಿನ ವರ್ಷಗಳಲ್ಲಿ ಚುನಾಯಿತ ಪ್ರತಿನಿಧಿಗಳಿಂದಲ್ಲೇ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹಾಗಾಗಿ ಇಂತಹ ಜನಪ್ರತಿನಿಧಿಗಳನ್ನು ಎಚ್ಚರಿಸುವುದು ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವೇ ಕೆಲವು ರಾಜಕಾರಣಿಗಳಿಂದ ಇಂತಹ ಅನುಚಿತ ಪ್ರಸಂಗಗಳು ಪುನರಾವರ್ತನೆಯಾಗುವ ಸಾಧ್ಯತೆಯಿವೆ. ಕೂಡಲೇ ಸಂಸದ ಸೇರಿ ರಾಜ್ಯ ಸಭಾ ಸದಸ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.