ಹುಬ್ಬಳ್ಳಿ: ಇಂದು ಚುನಾವಣಾ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ ಆಗಲಿದೆ. ಅದರಲ್ಲಿ ಬೆಳಗಾವಿಗೆ ತಮ್ಮ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಬೆಳಗಾವಿಯ ನಾಯಕರೊಂದಿಗೆ ಮಾತನಾಡಿದ್ದು, ಅಧಿಕೃತವಾಗಿ ಟಿಕೆಟ್ ಘೋಷಣೆ ಬಳಿಕ ಬೆಳಗಾವಿಗೆ ತೆರಳಿ ಚುನಾವಣೆ ಪ್ರಚಾರ ನಡೆಸಲಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಬೆಳಗಾವಿಯ ಬಿಜೆಪಿ ಹಿರಿಯ ನಾಯಕರಾದ ಪ್ರಭಾಕರ ಕೋರೆ, ಈರಣ್ಣಾ ಕಡಾಡಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಚರ್ಚೆ ಮಾಡಿದ್ದೇನೆ. ಎಲ್ಲರು ಸೇರಿಕೊಂಡು ಚುನಾವಣೆ ಎದುರಿಸೋಣ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಕೆಲವರು ತಮ್ಮ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿರುತ್ತಾರೆ. ಇದಕ್ಕೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ. ನನಗೆ ಟಿಕೆಟ್ ತಪ್ಪಿಸುವ ಸಲುವಾಗಿಯೇ ಹೋಗಿದ್ದಾರೆ ಎಂಬುದು ಸುಳ್ಳು. ಆ ಕುತಂತ್ರ ನಡೆದಿಲ್ಲ. ಮೋದಿ ಮತ್ತು ಅಮಿತ್ ಶಾ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು, ಬೇರೆ ಬೇರೆ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿರುವ ಕಾರಣಕ್ಕೆ. ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದ ಕಾರಣ ಸೀಟು ಹಂಚಿಕೆ ವಿಳಂಬವಾಗುತ್ತಿದೆ. ಬಿಜೆಪಿ ಸ್ವತಂತ್ರವಾಗಿ ದೇಶದಲ್ಲಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ದೇಶದಲ್ಲಿ ಆ ರೀತಿಯ ವಾತಾವರಣ ಇದೆ ಎಂದರು.
ಲೋಕಸಭಾ ಚುನಾವಣೆ ರಾಷ್ಟ್ರೀಯ ಮಟ್ಟದ ಚುನಾವಣೆ ಆಗಿದ್ದು, ಎಲ್ಲ ಸಮುದಾಯಕ್ಕೆ ಸಾಮಾನತೆ ಕೊಡುವ ನಿಟ್ಟಿನಲ್ಲಿ ಸೀಟು ಹಂಚಿಕೆ ಕುರಿತು ಪ್ರಯತ್ನ ನಡೆಯುತ್ತಿದೆ. ಯಾವ ಕ್ಷೇತ್ರಕ್ಕೆ ಯಾರು ಸೂಕ್ತ ಅಭ್ಯರ್ಥಿ ಎಂದು ವರಿಷ್ಠರು ಸರ್ವೇ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.