ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉತ್ತರ ಕೊಡಬೇಕು, ಇದೇ ಮಹದಾಯಿ ವಿಚಾರವನ್ನು ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಮಾಡಿದ್ದರು, ಹಾಗಾದರೆ ಇನ್ನೂ ಯಾಕೆ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಮಹದಾಯಿ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿದರೇ ಅವರಿಗೊಂದು ಗೌರವ, ಆದರೆ ಅವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ, ಮಹದಾಯಿ ಬಗ್ಗೆ ಅವರು ಉತ್ತರಿಸಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್’ನಲ್ಲಿ ಫ್ಲಡ್ ಗೇಟ್ ಓಪನ್ ಆಗುತ್ತದೆ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ತಿಂಗಳು ಬಳಿಕ ಶೆಟ್ಟರ್ ಪಶ್ಚಾತ್ತಾಪದ ಹೇಳಿಕೆ ಹೊರಗಡೆ ಬರಲಿದೆ ಕಾದು ನೋಡಿ ಎಂದು ತಿರುಗೇಟು ನೀಡಿದರು.
ಡಿ.ಕೆ.ಶಿ 2018 ರ ಈಡಿ ಪ್ರಕರಣ ರದ್ದು ವಿಚಾರದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಈಡಿ ದಾಳಿಯಾದಾಗ ಒಂದು ರೀತಿ, ಬಂಧನ ಆದಾಗ ಒಂದು ರೀತಿ, ಇಂದು ಒಂದು ರೀತಿ ತೋರಿಸ್ತೀರಿ ಈಗ ಸುಮ್ಮನೇ ಇದೀರಾ ಎಂದು ಪ್ರಶ್ನೆ ಮಾಡಿದರು.
ಪಾಕ್ ಪರ ಘೋಷಣೆ ವಿಚಾರದಲ್ಲಿ ಸಿಎಂ ಡಿಸಿಎಂ ರಾಜೀನಾಮೆಗೆ ಆಗ್ರಹ ವಿಚಾರವಾಗಿ, ಬಿಜೆಪಿಯವರಿಗೆ ಯಾವಾಗ ಬೇಕಂತೆ ರಾಜೀನಾಮೆ ಕೊಡೋಣ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ರು. ಅವರನ್ನ ಯಾಕೆ ಬಂಧನ ಮಾಡಲಿಲ್ಲ..? ನಾವು ಘೋಷಣೆ ಕೂಗಿದವರ ವಿಚಾರಣೆ ಮಾಡುತ್ತಿದ್ದೇವೆ. ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದಾರೆ. ಬಿಜೆಪಿಯವರಿಗೆ ಬದ್ಧತೆ ಇದೆಯಾ..? ಎಂದು ಹರಿಹಾಯ್ದರು.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿ, ನಾಳೆ ಚುನಾವಣಾ ಆಯೋಗದ ಸಭೆ ಇದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದರು.
ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ, ಕೇವಲ ಇಬ್ಬರು ಮೂವರಲ್ಲ ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್ ಗೆ ಆಗಮಿಸಲಿದ್ದಾರೆ ಎಂದು ಆಪರೇಷನ್ ಹಸ್ತದ ಸೂಚನೆ ನೀಡಿದರು.