ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ವೈಖರಿಯನ್ನು ಸಿದ್ಧಾಂತವನ್ನಾಗಿ ರೂಢಿಸಿಕೊಂಡಿದ್ದು, ಮರಾಠ ಸಮಾಜ ಅವರನ್ನು ಬೆಂಬಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು.
ಲೋಕಸಭೆ ಚುನಾವಣೆ ಪ್ರಯುಕ್ತ ಕಲಘಟಗಿ ಕ್ಷೇತ್ರದ ಮರಾಠ ಸಮುದಾಯದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಎಂದಿನಂತೆ ಈ ಬಾರಿಯೂ ಮರಾಠ ಸಮಾಜ ಬಿಜೆಪಿಯನ್ನು ಬೆಂಬಲಸಬೇಕು ಎಂದು ಕೋರಿದ ಸಚಿವರು, ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ವೈಖರಿಯನ್ನೇ ಮೋದಿ ಅವರು ಸಿದ್ಧಾಂತವನ್ನಾಗಿ ರೂಢಿಸಿಕೊಂಡಿದ್ದಾರೆ ಎಂದು ಹೇಳಿದರು.
ದೇಶದ ಹೆಮ್ಮೆಯ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿಯವರು ತಮ್ಮ ಸರ್ವಸ್ವವನ್ನೂ ತ್ಯಜಿಸಿ ದೇಶದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು. ವಿಕಸಿತ ಭಾರತದ ಮೂಲಕ ನವ ಭಾರತವನ್ನು ನಿರ್ಮಿಸಲು ಪ್ರಧಾನಿ ಮೋದಿಜಿ ಮುಂದಾಗಿದ್ದು, ಮೂರನೇ ಅವಧಿಯಲ್ಲಿ ದೇಶದ ಇತಿಹಾಸವನ್ನು ವಿಶ್ವದ ಉದ್ದಗಲಕ್ಕೂ ಸಾರಲಿದ್ದಾರೆ. ಭಾರತ ಇನ್ನು, ವಿಶ್ವದ ಹಿರಿಯಣ್ಣನಾಗಿ ಹೊರಹೊಮ್ಮಲಿದೆ ಎಂದು ಸಚಿವ ಜೋಶಿ ಹೇಳಿದರು.
ಇದೇ ವೇಳೆ ಕಲಘಟಗಿ ಕ್ಷೇತ್ರದ ಮರಾಠ ಸಮುದಾಯದ ಮುಖಂಡರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಚಿವರಿಗೆ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವ ಜೋಶಿ ಅವರು, ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ನಾಗರಾಜ್ ಛಬ್ಬಿ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತ್ತಗಟ್ಟಿ, ಸಮುದಾಯದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.