ಹುಬ್ಬಳ್ಳಿ : ರಾಜ್ಯದಲ್ಲಿ ಈ ಬಾರಿ 26 ಸ್ಥಾನ ಹಾಗೂ ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಮೋದಿಯವರು ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ಪ್ರತಿಪಾದಿಸಿದರು. ದೇಶ ವ್ಯಾಪಿ ಬಿಜೆಪಿ ಪರ ಅಲೆ ಇದೆ. ಮತದಾನ ಹೆಚ್ಚಿಸುವಂತೆ ಪ್ರಧಾನಿಗಳೆ ಕರೆ ನೀಡಿದ್ದಾರೆ. ಕರ್ನಾಟಕದಿಂದ 25-26 ಸ್ಥಾನಗಳಲ್ಲಿ ಸ್ಪಷ್ಟವಾಗಿ ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸುವುದಾಗಿ ಅವರು ತಿಳಿಸಿದರು. ಪಕ್ಷದಲ್ಲಿನ ಬಂಡಾಯದ ಕುರಿತು ಮಾತನಾಡಿದ ಅವರು, ಎರಡು ದಿನಗಳಲ್ಲಿ ಈ ಬಂಡಾಯ ಎಲ್ಲವೂ ಶಮನವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.