ಹುಬ್ಬಳ್ಳಿ : ಕೇಂದ್ರ ಸರ್ಕಾರದ ಹಿಟ್ ಆ್ಯಂಡ್ ರನ್ ತಿದ್ದುಪಡಿ ಕಾನೂನನ್ನು ಹಿಂಪಡೆಯಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ಅಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ಆಕ್ರೋಶ ಹೊರಹಾಕಿದರು.
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸುರಕ್ಷಾ ಸಂಘ ಹಾಗೂ ದಿ.ಲಕ್ಷ್ಮಣ ಹಿರೇಕೇರೂರ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಸ್ಟೇಷನ್ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ ನೂರಾರು ಆಟೋ ಚಾಲಕರು ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೆಚ್‘ಎಸ್‘ಆರ್‘ಪಿ ನಂಬರ್ ಪ್ಲೇಟ್ ದರವನ್ನು ಕಡಿತಗೊಳಿಸಬೇಕು, ಇಲ್ಲವೇ ಉಚಿತವಾಗಿ ವಿತರಣೆ ಮಾಡಬೇಕು, ಆಟೋ ರಿಕ್ಷಾ ಚಾಲಕರಿಗೆ ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡಬೇಕು, ಚಾಲಕರ ದಿನ ಆಚರಣೆಯನ್ನು ಸರ್ಕಾರ ಘೋಷಣೆ ಮಾಡಬೇಕು, ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಬೇಕು, ಆಟೋ ಚಾಲಕರು ಅಪಘಾತದಲ್ಲಿ ಮರಣ ಹೊಂದಿದರೇ 5 ಲಕ್ಷ ಪರಿಹಾರ ಬದಲಾಗಿ 10 ಲಕ್ಷ ನೀಡಬೇಕು, ಆಟೋ ರಿಕ್ಷಾ ವಿಮೆಯನ್ನು ಕಡಿಮೆಗೊಳಿಸಬೇಕು, ಹು–ಧಾ ಅವಳಿನಗರದಲ್ಲಿ ಅಧಿಕೃತ ಆಟೋ ನಿಲ್ದಾಣಗಳನ್ನು ನಿರ್ಮಿಸಿ ಕೊಡಬೇಕು, 60 ವರ್ಷ ಮೇಲ್ಪಟ್ಟ ಆಟೋ ರಿಕ್ಷಾ ಚಾಲಕರಿಗೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.