ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತನ್ನ ಪಾಟ್ನರ್ಗೆ ಭರ್ಜರಿ ಟೆನ್ಷನ್ ಕೊಟ್ಟಿದೆ. ಸೀಟು ಹಂಚಿಕೆ ವಿಚಾರದಲ್ಲಿ ಮುನಿಸಿಕೊಂಡಿರುವ ಕುಮಾರಸ್ವಾಮಿ ನಿನ್ನೆ ಕೇಸರಿ ಪಡೆ ಮೇಲೆ ಬಾಂಬ್ ಸಿಡಿಸಿದ್ದರು. 1 ರಿಂದ 2 ಸೀಟು ಪಡೆಯೋಕೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ.. ? ಹಾಸನ, ಮಂಡ್ಯ ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇವೆ.. ನಾವೇನು 6-7 ಸೀಟು ಕೇಳಿಲ್ಲ. 3-4 ಸೀಟು ಕೊಡಿ ಅಂತ ಅಷ್ಟೇ ಕೇಳಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ನಡೆಗೆ ಬೇಸರ ವ್ಯಕ್ತಪಡಿಸಿದರು.
ಅಲ್ಲದೇ ಮೈತ್ರಿ ಅಗತ್ಯತೆ ಬಗ್ಗೆ ಪ್ರಶ್ನಾರ್ಥಕ ಚಿನ್ಹೆ ಹಾಕಿದ್ದರು. ಕಾಂಗ್ರೆಸ್ ವಿರುದ್ಧ ಸೆಣಸಾಡಲು ಜೆಡಿಎಸ್ ನೆರವು ಪಡೆದಿದ್ದ ಬಿಜೆಪಿಗೆ ಇದರಿಂದ ಫುಲ್ ಟೆನ್ಷನ್ ಆಗಿದೆ. ಯಾಕೆಂದರೆ ಈಗಾಗಲೇ ಪಕ್ಷದಲ್ಲಿ ನಾಯಕರು ಸೆಟೆದು ನಿಂತಿದ್ದಾರೆ. ಇದೀಗ ಮಿತ್ರ ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದು, ಕೇಸರಿ ನಾಯಕರು ಕಂಗಾಲಾಗುವಂತೆ ಮಾಡಿದೆ. ಕಾಂಗ್ರೆಸ್ ಮತ ಬ್ಯಾಂಕ್ ಛಿದ್ರ ಮಾಡಲು ಪ್ಲ್ಯಾನ್ ಮಾಡಿದ್ದ ಬಿಜೆಪಿಗೆ ಇದೀಗ 18 ರಿಂದ 20 ಕ್ಷೇತ್ರಗಳಲ್ಲಿ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಹೆಚ್ಡಿಕೆ ಯಾವಾಗ ಬಿಜೆಪಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದರೋ ಕೇಸರಿ ನಾಯಕರು ಫುಲ್ ಅಲರ್ಟ್ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಜಿ ಪ್ರಧಾನಿ ಹೆಚ್ಡಿಡಿ ಹಾಗೂ ಕುಮಾರಸ್ವಾಮಿ ಜೊತೆ ದೂರವಾಣಿ ಮೂಲಕ ಮಾತನಾಡಿ, ಯಾವುದೇ ಕಾರಣಕ್ಕೂ ಮೈತ್ರಿ ಮುರಿಯೋದು ಬೇಡ ಎಂದು ಮನವಿ ಮಾಡಿದ್ದಾರೆ. ಸೀಟು ಹಂಚಿಕೆ ಸುಸೂತ್ರವಾಗಿ ಇನ್ನೇರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು ದಳಪತಿಗಳಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ದೆಹಲಿ ನಾಯಕರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ನಾಳೆ ದೆಹಲಿಯಲ್ಲಿ ನಡೆಯಲಿರುವ ಕೇಂದ್ರಿಯ ಚುನಾವಣಾ ಸಮಿತಿ ಸಭೆಯಲ್ಲಿ ತಮ್ಮ ಬೇಡಿಕೆಯನ್ನು ಪ್ರಸ್ತಾಪಿಸುವುದಾಗಿ ಬಿಎಸ್ವೈ ಅಭಯ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಮೈತ್ರಿಯಲ್ಲಿ ಗೊಂದಲ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಒಟ್ಟಾರೆ ಅವಕಾಶವಾದಿ ರಾಜಕಾರಣಕ್ಕೆ ಹೆಸರಾದ ಜೆಡಿಎಸ್ ಇದೀಗ ಚುನಾವಣಾ ಅಂಗಳದಲ್ಲಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸರಿಯಾದ ಸಮಯದಲ್ಲೇ ಬಿಸಿ ಮುಟ್ಟಿಸಿ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸ್ಪಷ್ಟ.