ಗದಗ : ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೇಣುಕಾ ತೇಲಿ (49), ಮಂಜುನಾಥ್ (22), ಸಾವಕ್ಕ ತೇಲಿ (47) ಮೃತ ದುರ್ದೈವಿಗಳು.
ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ರೇಣುಕಾ ತೇಲಿ ರೈಲು ಹಳಿಗೆ ಹಾರಿದ್ದರು. ತಾಯಿಯನ್ನು ಹಿಂಬಾಲಿಸಿ ಬಂದಿದ್ದ ಮಂಜುನಾಥ್ ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಪ್ರಾಣವನ್ನು ತೆಗೆದಿತ್ತು.
ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಭಾನುವಾರ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಅಕ್ಕ ರೇಣುಕಾಳ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಎಂಬುವವರು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.
ಸಾವಕ್ಕ, ರೇಣುಕಾ ಮಧ್ಯೆ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್‌ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರವು ಕೂಡು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.