ದೊಡ್ಡಬಳ್ಳಾಪುರ: ಅಣಬೆಗಳು ಕೊಳೆತ ವಸ್ತುಗಳ ಮೇಲೆ ಬೆಳೆಯುತ್ತವೆ. ಆದರೆ, ಜೀವಂತ ಕಪ್ಪೆಯ ಮೇಲೆ ಅಣಬೆ ಮೊಳಕೆಯೊಡೆದಿರುವ ಅಚ್ಚರಿ ಘಟನೆ ನಡೆದಿದೆ. ವಿಜ್ಞಾನ ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಸ್ಮಯವನ್ನು ಮೊದಲ ಬಾರಿಗೆ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಕೀಟಗಳ ಸಂಶೋಧಕ ವೈ.ಟಿ.ಲೋಹಿತ್ ಮತ್ತು ಅವರ ತಂಡಕ್ಕೆ ಸಲ್ಲುತ್ತೆ.
ವೈ.ಟಿ ಲೋಹಿತ್ ಅವರು ಡಬ್ಲ್ಯೂಡಬ್ಲ್ಯೂಎಫ್ ಸಂಸ್ಥೆಯ ಹಿರಿಯ ಯೋಜನಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈ.ಟಿ.ಲೋಹಿತ್ ಪರಿಸರ ಪ್ರೇಮಿ, ಕೀಟ ಮತ್ತು ಪಕ್ಷಿಗಳ ಪ್ರಪಂಚವನ್ನು ಬಹಳ ಕುತೂಹಲದಿಂದ ನೋಡುವರು. ಆಸಕ್ತಿಯಂತೆ ಅವರು ಕೀಟ ಮತ್ತು ಪಕ್ಷಿಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಹೀಗೆ ವೈ.ಟಿ.ಲೋಹಿತ್ ಅವರು, ಕಪ್ಪೆ ಮತ್ತು ಹಾವುಗಳ ಬಗ್ಗೆ ಅಧ್ಯಯನ ಮಾಡಲು ಕುದುರೆಮುಖ ಪರ್ವತ ಶ್ರೇಣಿಯ ಕಾರ್ಕಳ ತಾಲೂಕಿನ ಮಾಳ ಗ್ರಾಮಕ್ಕೆ ಸ್ನೇಹಿತರಾದ ಚಿನ್ಮಯ್ ಸಿ.ಮಳಿಯೆ, ನವೀನ್ ಐಯ್ಯರ್, ಬಿ.ಜಿ.ನಿಶಾ ಹಾಗೂ ಎಸ್.ಆಶಾ ಹೋಗಿದ್ದರು. ಈ ವೇಳೆ, ಇವರ ತಂಡಕ್ಕೆ ಕಪ್ಪೆಗಳ ಗುಂಪು ಕಣ್ಣಿಗೆ ಬಿದ್ದಿದೆ. ಸುಮಾರು 50 ಕಪ್ಪೆಗಳ ಗುಂಪಿನಲ್ಲಿ ಒಂದು ಕಪ್ಪೆ ಮಾತ್ರ ವಿಶೇಷವಾಗಿ ಕಂಡಿದೆ. ವೈ.ಟಿ.ಲೋಹಿತ್ ಅವರು, ತಮ್ಮ ಬಳಿ ಇದ್ದ ವಿಶೇಷವಾದ ಕ್ಯಾಮರಾ ಮೂಲಕ ಕಪ್ಪೆಯನ್ನು ಸೆರೆ ಹಿಡಿದಾಗ, ಅದರ ಪಕ್ಕೆಯ ಮೇಲೆ ಅಣಬೆ ಮೊಳಕೆಯೊಡೆದಿದ್ದು ಕಾಣಿಸಿದೆ.