ಬೆಂಗಳೂರು:- ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹೀರಾತಿನ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಈ ರೀತಿ ಉತ್ತರಿಸಿದರು.

‘ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹೀರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಾವು ಪತ್ರಿಕೆ ಹಾಗೂ ಮ್ಯಾಗಝಿನ್ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತಯಾಚನೆ ಮಾಡಿದ್ದರೆ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೋಟಿಸ್ಗೆ ಉತ್ತರ ನೀಡುತ್ತೇವೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.