ಧಾರವಾಡ : ಪೇಡಾ ನಗರಿಯ ಧಾರವಾಡದ ಗಲ್ಲಿಗಲ್ಲಿಯಲ್ಲೂ ಹೋಳಿ ಸಂಭ್ರಮ ಮನೆ ಮಾಡಿತ್ತು. ಹೋಳಿ ಹಬ್ಬದ ಪ್ರಯುಕ್ತ ನಗರದ ಕೆಸಿಡಿ ಕಾಲೇಜ್ ಎದುರು ಹಲವಾರು ಮನೋರಂಜನಾ ಸ್ಪರ್ಧೆಗಳಾದ ಮಡಿಕೆ ಒಡೆಯುವುದು, ರೇನ್ ಡಾನ್ಸ್ ಹಾಗೂ ಡಿಜೆ ಸೌಂಡ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಹಿಂದೂ ಪರ ಸಂಘಟನೆ ಹಮ್ಮಿಕೊಂಡಿತ್ತು. ಹೋಳಿ ಸಂಭ್ರಮದಲ್ಲಿ ಸಾವಿರಕ್ಕೂ ಅಧಿಕ ಯುವಕ, ಯುವತಿಯರು ಭಾಗಿಯಾಗಿದ್ರು. ರಕ್ಷಣಾ ದೃಷ್ಟಿಯಿಂದ ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬಣ್ಣದೋಕುಳಿ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿಯಾಗಿದ್ದರು.
ಜೋಶಿ ಆಗಮಿಸುತ್ತಿದ್ದಂತೆ ಎಲ್ಲೆಡೆ ಜೈಕಾರ ಮೊಳಗಿತು. ಜೋಶಿ ಅವರನ್ನು ಹೆಗಲೆ ಮೇಲೆ ಹೋತ್ತು ಅಭಿಮಾನಿಗಳು ಜೈಕಾರ ಹಾಕಿದ್ರು. ಬಳಿಕ ಕಾರ್ಯಕ್ರಮದಲ್ಲಿ ನೆರೆದಿದ್ದ ಯುವಕ ಯುವತಿಯರಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿದರು. ಭಾರತೀಯ ಪರಂಪರೆಯಲ್ಲಿ ಎಲ್ಲ ಹಬ್ಬಗಳಿಗೂ ತನ್ನದೆ ಆದ ಮಹತ್ವ ಇದೆ. ಈ ಹಬ್ಬ ನಮ್ಮ ಸಂಸ್ಕೃತಿ ಹಾಗೂ ಸನಾತನ ಧರ್ಮದ ಒಂದು ಭಾಗ. ಕೆಲವರು ಸನಾತನ ಧರ್ಮವನ್ನು ವಿಮರ್ಶೆ ಮಾಡಲು ಹೋಗುತ್ತಿದ್ದಾರೆ. ನೀವು ಸನಾತನ ಧರ್ಮದ ಸಂರಕ್ಷಕರು ಎಂಬುದು ಬಹಳ ಮಹತ್ವವಾದದ್ದು ಎಂದು ಮನಮುಟ್ಟುವಂತೆ ನೆರೆದಿದ್ದ ಜನಸಾಗರಕ್ಕೆ ಶುಭಾಶಯ ತಿಳಿಸಿದರು.