ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಭಕ್ತರು ಒತ್ತಾಯಿಸಿದ್ದು, ಈ ಕುರಿತು ಶೀಘ್ರವಾಗಿ ಬೆಂಗಳೂರಿನಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಶಿರಹಟ್ಟಿಯ ಶ್ರೀ ಫಕೀರ್ ದಿಂಗಾಲೇಶ್ವರ ಶ್ರೀಗಳು ಹೇಳಿದರು‌.

ಧಾರವಾಡ ನಗರದ ಸೇವಾಲಯ ಸಭಾ ಭವನದಲ್ಲಿ ಭಕ್ತರ ಸಭೆ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರನ್ನು ಬದಲಾಯಿಸಿ ಬೇರೆಯವರಿಗೆ ಅವಕಾಶ ನೀಡಬೇಕೆಂದು ಮಾ.31 ರ ಗಡುವು ನೀಡಲಾಗಿತ್ತು. ಜೋಶಿಯವರ ಬದಲಾವಣೆ ಮಾಡದ ಕಾರಣ ಇಂದು ಭಕ್ತರ ಸಭೆ ನಡೆಸಿ ಚರ್ಚಿಸಲಾಯಿತು. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಭಕ್ತರು ಸಭೆಯಲ್ಲಿ ಭಕ್ತರು ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದರು.

ಎಲ್ಲ ಸಮಾಜದ ಭಕ್ತರ ಅಭಿಪ್ರಾಯ ಒಂದೇ ಆಗಿದೆ. ಎಲ್ಲ ಸಮಾಜದವರಿಂದ ಬೆಂಬಲ ವ್ಯಕ್ತವಾಗಿದೆ. ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ಎಂದು ಭಕ್ತರು ಮನವಿ ಮಾಡಿದ್ದಾರೆ ಎಂದು ಹೇಳಿದರು. ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸುವುದೇ ನನ್ನ ಮುಖ್ಯ ಉದ್ದೇಶ, ಮುಂದೆ ಎಂತಹ ಪರಿಸ್ಥಿತಿ ಎದುರಾದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಈಗಾಗಲೇ ಮಠಾಧಿಪತಿಗಳ ಅಭಿಪ್ರಾಯ ತೆಗೆದುಕೊಂಡಿದ್ದೇನೆ. ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದು, ಸರ್ಕಾರ ಅಂಗರಕ್ಷಕರನ್ನು ಕೊಟ್ಟಿದೆ. ಭಕ್ತರು ಸಹ ಸಮಿತಿಯನ್ನು ರಚಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮಠಾಧೀಶರ ನಡುವೆ ಪರಸ್ಪರ ವೈಮನಸ್ಸು ತಂದಿಟ್ಟು ಒಡೆದು ಆಳುವ ನೀತಿಯನ್ನು ಪ್ರಲ್ಹಾದ್ ಜೋಶಿ ಅನುಸರಿಸುತ್ತಿದ್ದಾರೆ. ಧಾರವಾಡದ ಮುರುಘಾಮಠದ ಸ್ವಾಮೀಜಿಗಳಿಗೆ ಒತ್ತಡ ಹಾಕಿ ಪತ್ರವನ್ನು ಓದಿಸಿದ್ದಾರೆ. 10 ವರ್ಷದಿಂದ ಜೋಶಿ ಅವರಿಗೆ ಬುದ್ದಿ ಹೇಳುತ್ತಾ ಬಂದಿದ್ದೇನೆ. ಆದರೆ ಅವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಮಠಾಧೀಶರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ‌. ಅವರು ತಮ್ಮ ತಪ್ಪು ಒಪ್ಪಿಕೊಂಡರು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರದ ಆಸೆಯಿಂದ ನಾನು ಹೀಗೆ ಮಾಡುತ್ತಿಲ್ಲ, ಬದಲಾಗಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಅನಿವಾರ್ಯ, ಈ ಬಾರಿ ನೂರಕ್ಕೆ ನೂರರಷ್ಟು ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಬದಲಾವಣೆ ಆಗೇ ಆಗುತ್ತದೆ. ನಮ್ಮದು ಪಕ್ಷಗಳ ವಿರುದ್ಧದ ಹೋರಾಟವಲ್ಲ, ಜೋಶಿಯವರ ವ್ಯಕ್ತಿತ್ವದ ವಿರುದ್ಧ ಹೋರಾಟ ಎಂದು ಹೇಳಿದರು‌.

By admin

Leave a Reply

Your email address will not be published. Required fields are marked *

Verified by MonsterInsights