ಧಾರವಾಡ: ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಇದೀಗ ಧಾರವಾಡದ ಕೇಂದ್ರ ಕಾರಾಗೃಹದಲ್ಲಿರುವ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ ಅವರು, ಬಂಧಿತ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.
ತಡಕೋಡ ಗ್ರಾಮದ ಸದ್ದಾಂಹುಸೇನ್ ಎಂಬ ಯುವಕ ಅಯೋಧ್ಯೆ ರಾಮಮಂದಿರದ ಮೇಲೆ ಹಸಿರು ಬಾವುಟ ಹಾಕಿ ಎಡಿಟ್ ಮಾಡಿದ್ದ ಫೋಟೋವನ್ನು ತನ್ನ ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದ. ಇದರಿಂದ ಕೆರಳಿದ ಹಿಂದೂ ಕಾರ್ಯಕರ್ತರು ತಡಕೋಡ ಗ್ರಾಮದ ಈದ್ಗಾ ಕಟ್ಟಡದ ಗುಂಬಜ್ ಕೆಡವಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ಕೇಂದ್ರ ಕಾರಾಗೃಹದಲ್ಲಿಡಲಾಗಿದೆ.
ಇಂದು ಅವರನ್ನು ಭೇಟಿ ಮಾಡಿದ ಮಾಜಿ ಶಾಸಕ ಅಮೃತ ದೇಸಾಯಿ, ಅವರಿಗೆ ಧೈರ್ಯ ತುಂಬಿದ್ದಾರೆ. ಇದು ರಾಜಕೀಯ ಪ್ರೇರಿತ ದೂರಾಗಿದೆ. ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ಈಗಾಗಲೇ ಬಿಟ್ಟಿದ್ದು, ಬಿಜೆಪಿ ಕಾರ್ಯಕರ್ತರನ್ನು ಮಾತ್ರ ಇನ್ನೂ ಬಂಧನದಲ್ಲಿಟ್ಟಿದ್ದಾರೆ ಎಂದು ಅಮೃತ ದೇಸಾಯಿ ಈ ಸಂದರ್ಭದಲ್ಲಿ ತಿಳಿಸಿದರು. ಈಗಾಗಲೇ ಬಂಧನಕ್ಕೊಳಗಾಗಿರುವ ಹಿಂದೂ ಕಾರ್ಯಕರ್ತರ ಬಿಡುಗಡೆಗಾಗಿ ಜಾಮೀನು ಅರ್ಜಿ ಹಾಕಲಾಗಿದ್ದು, ಇಂದು ಈ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.