ಹಣಕಾಸು

ಏ. 1ರಂದು ಇರಲ್ಲ 2,000 ರೂ ನೋಟುಗಳ ವಿನಿಮಯ ಸೇವೆ

ನವದೆಹಲಿ : ಸಾರ್ವಜನಿಕವಾಗಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಏಪ್ರಿಲ್ 1ರಂದು ವಿನಿಮಯಕ್ಕೆ ಅವಕಾಶ ಇರುವುದಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ನಿನ್ನೆ ಗುರುವಾರ ಹೇಳಿದೆ. ಆರ್​ಬಿಐನ 19 ಕಚೇರಿಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡುವ ಅವಕಾಶ ಇದೆ. ಏಪ್ರಿಲ್ 1ರಂದು ಬ್ಯಾಂಕ್ ರಜಾ ದಿನ ಅಲ್ಲವಾದರೂ ಅಂದು ವಾರ್ಷಿಕ ಲೆಕ್ಕಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಹೀಗಾಗಿ, ಅಂದು ಆರ್​ಬಿಐ ಮಾತ್ರವಲ್ಲ ಎಲ್ಲಾ ಬ್ಯಾಂಕುಗಳು ಸಾರ್ವಜನಿಕ ಸೇವೆಗೆ ಲಭ್ಯ ಇರುವುದಿಲ್ಲ. ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮರಳಿಸುವ ಸೇವೆಯೂ ಅಂದು ಇರುವುದಿಲ್ಲ.

ಏಪ್ರಿಲ್ 2ರಂದು, ಹಾಗು ನಂತರ ವರ್ಕಿಂಗ್ ದಿನಗಳಂದು ಆರ್​ಬಿಐ ಕಚೇರಿಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಬಹುದು. ಹತ್ತು ತಿಂಗಳ ಹಿಂದೆ, 2023ರ ಮೇ 19ರಂದು ಆರ್​ಬಿಐ 2,000 ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದಾಗಿ ಘೋಷಿಸಿತು. ಆಗ 3.56 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಸಾರ್ವಜನಿಕರಲ್ಲಿ ಇತ್ತು ಎನ್ನಲಾಗಿದೆ.

ವಿವಿಧ ಬ್ಯಾಂಕುಗಳ ಮೂಲಕ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮ ಅಕೌಂಟ್​​ಗೆ ಡೆಪಾಸಿಟ್ ಮಾಡಲು ಆರ್​ಬಿಐ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಇದೀಗ ಕೆಲ ತಿಂಗಳಿಂದ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಮಾತ್ರ ಈ ನೋಟುಗಳ ಎಕ್ಸ್​ಚೇಂಜ್​ಗೆ ಅವಕಾಶ ಮುಂದುವರಿದಿದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯಲ್ಲೂ ನೋಟು ವಿನಿಮಯ ಮಾಡಿಕೊಳ್ಳಬಹುದು. ಅಂಚೆ ಮೂಲಕ ಆರ್​ಬಿಐ ಕಚೇರಿ ವಿಳಾಸಕ್ಕೆ ನೋಟು ಕಳುಹಿಸಿ ಆ ಮೂಲಕವೂ ಆ ಹಣವನ್ನು ತಮ್ಮ ಖಾತೆಗಳಿಗೆ ಡೆಪಾಸಿಟ್ ಮಾಡಿಸಿಕೊಳ್ಳಬಹುದು.

Comments (0)

Your email address will not be published. Required fields are marked *

Back to top button