ಇತ್ತೀಚಿಗೆ ಅಸ್ಪೃಶ್ಯತೆ ,ಧರ್ಮ ಭೇದ ,ಜಾತಿ ತಾರತಮ್ಯವನ್ನ ಆಧರಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ ,ಬರೀ ಮನರಂಜನೆ ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಿಟ್ಟಿನಲ್ಲಿ ,ಪ್ರಸ್ತುತ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಸಿನಿಮಾಗಳು ತೆರೆ ಕಂಡಿದೆ. ಜೈ ಭೀಮ್, ಕಾಟೇರ , ಮಾಮಣ್ಣನ್, ಕರ್ಣನ್,ಅಸುರನ್,ಹೀಗೆ ಹಲವಾರು ಸಿನಿಮಾಗಳು ಬೇರೆ ಬೇರೆ ಬ್ಯಾನರ್ ನಡಿ ತೆರೆಗೆ ಬಂದರು ಅದರ ಕಥೆಯ ಮೂಲ ಜಾತಿ ವ್ಯಸ್ಥೆಯ ಕುರಿತೇ ಆಗಿತ್ತು.
ಇತ್ತೀಚಿಗೆ ಬಿಡುಗಡೆಯಾದ ಕನ್ನಡದ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಕೂಡ ಜಾತಿ ವ್ಯವಸ್ಥೆಯ ಸಾರಾಂಶವನ್ನ ಒಳಗೊಂಡಿತ್ತು. ತಮಿಳು ನಟ ಧನುಷ್ ಮತ್ತು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ನಿನ್ನೆ ಬಿಡುಗಡೆಗೊಂಡಿದ್ದು ದೇಶದ ನಾನಾ ರಾಜ್ಯದಲ್ಲಿ ಪ್ರದರ್ಶನ ಗೊಂಡು ಭಾರಿ ಪ್ರಶಂಸೆಗೆ ಗುರಿಯಾಗಿದೆ ,ಕ್ಯಾಪ್ಟನ್ ಮಿಲ್ಲರ್ ಸಿನೆಮಾ ಕೂಡ ಇದೇ ಎಳೆಯನ್ನ ಹಿಡಿದು ಸ್ವಾತಂತ್ರ್ಯ ಪೂರ್ವದ ಅವಧಿಗೆ ಹೊರಳಿದೆ.
‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಕತೆ ಏನು?
ಒಂದೆಡೆ ಬ್ರಿಟಿಷರ ವಿರುದ್ಧ, ಇನ್ನೊಂದೆಡೆ ನಮ್ಮದೇ ದೇಶದ ಮೇಲ್ವರ್ಗದ ಶ್ರೀಮಂತರ ವಿರುದ್ಧ ಬಂಡಾಯ ಏಳುವ ಈಸಾ ಅಲಿಯಾಸ್ ಕ್ಯಾಪ್ಟನ್ ಮಿಲ್ಲರ್ ಎಂಬ ವೀರ ನಾಯಕನ ಕಥೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿದೆ. ಸಾಮಾನ್ಯ ಗ್ರಾಮದ ಯುವಕನಾಗಿದ್ದವನು ಬ್ರಿಟಿಷ್ ಸರ್ಕಾರದ ಸೈನ್ಯಕ್ಕೆ ಸೇರ್ಪಡೆಗೊಂಡು ಕ್ಯಾಪ್ಟನ್ ಆಗುವ ಕನಸಿನಲ್ಲಿ ಮುಳುಗಿರುತ್ತಾನೆ . ಆದರೆ ಸೈನ್ಯಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆತನ ವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ. ಆಗ ಆತ ಬ್ರಿಟಿಷರ ವಿರುದ್ಧಸಮರಕ್ಕೆ ಇಳಿಯುತ್ತಾನೆ. ಆಗ ಅವನಿಗೆ ಎದುರಾಗುವ ಸವಾಲುಗಳು ಹಲವು. ಅದನ್ನೆಲ್ಲ ಆತ ಹೇಗೆ ಪರಿಹರಿಸುತ್ತಾನೆ? ಅಂತಿಮವಾಗಿ ಕ್ಯಾಪ್ಟನ್ ಮಿಲ್ಲರ್ಗೆ ಜಯ ಸಿಗುತ್ತಾ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾವನ್ನೇ ನೋಡಬೇಕು.
ಧನುಷ್ ಪಾತ್ರ ಏನು ಮತ್ತು ಹೇಗಿದೆ?
ಪ್ರತಿಯೊಂದು ಸಿನಿಮಾದಲ್ಲೂ ಡಿಫರೆಂಟ್ ಪಾತ್ರಗಳನ್ನ ನಿಭಾಯಿಸುವ ಮೂಲಕ ಧನುಷ್ ಅವರು ಅಭಿಮಾನಿಗಳನ್ನ ರಂಜಿಸುತ್ತಾರೆ. ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲೂ ಅವರು ಆ ತರಹದ್ದೇ ಒಂದುವಿಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೋಷಿತ ವರ್ಗದ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಬೇರೆ ಬೇರೆ ರೂಪ ಇದೆ. ಯೋಧನಾಗಿ ಅವರು ಗಮನ ಸೆಳೆಯುತ್ತಾರೆ. ನಂತರ ಆಳುವವರ ವಿರುದ್ಧ ತಿರುಗಿಬಿದ್ದ ತೀವ್ರಗಾಮಿಯಾಗಿಯೂ ಅವರು ಅಬ್ಬರಿಸುತ್ತಾರೆ.
ಕಿಕ್ಕ್ ತರಿಸೋ ಅಬ್ಬರ:
ಧನುಷ್ ಕ್ಲಾಸ್ ಪಾತ್ರಗಳನ್ನ ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೋ ಅಷ್ಟೇ ಅದ್ಭುತವಾಗಿ ಮಾಸ್ ಪಾತ್ರಗಳನ್ನು ಕೂಡ ಸಮರ್ಥವಾಗಿ ಮಾಡುತ್ತಾರೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರದಲ್ಲಿ ಈ ಎರಡೂ ರೂಪ ಇದೆ. ಆದರೆ ಮಾಸ್ ಅವತಾರವೇ ಹೆಚ್ಚು ಕಾಣ ಸಿಗುತ್ತೆ . ಕಥೆಯಲ್ಲಿ ಅಗತ್ಯಕ್ಕೂ ಮೀರಿದಷ್ಟು ಸಾಹಸ ದೃಶ್ಯಗಳುಅಡಗಿದೆ . ನಿಜವಾದ ಆಶಯವನ್ನೇ ಮಸುಕು ಮಾಡುವ ರೀತಿಯಲ್ಲಿ ಕುಸ್ತಿ ಸೀನ್ಗಳು ಅಬ್ಬರಿಸಿವೆ. ಒಟ್ಟಾರೆ ಸಿನಿಮಾದಲ್ಲಿ ಮದ್ದು-ಗುಂಡುಗಳ ಶಬ್ದವೇ ಹೆಚ್ಚಾಯಿತೇನೋ ಅನ್ನಿಸಿ ಬಿಡುತ್ತದೆ ಕಥೆ ಕೂಡ ಎಲ್ಲಿಂದ ಮತ್ತಿನ್ನೆಲ್ಲಿಗೋ ಸಾಗಿದಂತೆ ಭಾಸವಾಗುತ್ತದೆ.
‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ಹ್ಯಾಟ್ರಿಕ್ ಹೀರೊ ಪಾತ್ರವೇನು?
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಷ್ ಹೀರೋ. ನಾಯಕಿಯಾಗಿ ಪ್ರಿಯಾಂಕಾ ಅರುಳ್ ಮೋಹನ್ ನಟಿಸಿದ್ದಾರೆ. ಹಾಗಾದರೆ, ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೊ ಶಿವಣ್ಣನ ಪಾತ್ರವೇನು ? ಹೌದು, ಧನುಷ್ ಅವರಿಗೆ ಅಣ್ಣನ ಪಾತ್ರದಲ್ಲಿ ನಟ ಶಿವಣ್ಣ ಕಾಣಿಸಿಕೊಂಡಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವು ಸ್ವಾತಂತ್ರ್ಯಪೂರ್ವದ ಕಥೆಯನ್ನು ಹೊಂದಿದೆ. ಹಾಗಾಗಿ, ಶಿವಣ್ಣ ಬ್ರಿಟಿಷರ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಳ್ಳದ ಶಿವಣ್ಣನ ಪಾತ್ರವು ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಸಖತ್ ಟ್ವಿಸ್ಟ್ ನೀಡುತ್ತದೆ.
ಸಿನಿಮಾ ಹೇಗಿದೆ? ಅಭಿಮಾನಿಗಳು ಏನಂದ್ರು?
ಒಟ್ಟಾರೆ, ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಕ್ಕೆ ನಾನಾ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ. ನಿರೂಪಣೆ ಮಂದಗತಿ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಹ್ಯಾಟ್ರಿಕ್ ಹೀರೊ ಫ್ಯಾನ್ಸ್‌ಗೆ ಈ ಸಿನಿಮಾ ಇಷ್ಟವಾಗಿದ್ದು, ಶಿವಣ್ಣ ಕರುನಾಡ ಚಕ್ರವರ್ತಿ..’, ‘ಜೈಲರ್‌ಗಿಂತ ಮಸ್ತ್ ಆಗಿದೆ ಶಿವಣ್ಣನ ಎಂಟ್ರಿ..’, ‘ಶಿವಣ್ಣನ ಪಾತ್ರ ತುಂಬ ಇಷ್ಟ ಆಯ್ತು..’ ಎಂದೆಲ್ಲಾ ಅಭಿಮಾನಿಗಳು ಹೇಳಿದ್ದಾರೆ. ಆದರೆ ಇನ್ನೊಂದಿಷ್ಟು ಮಂದಿ, ‘ಶಿವಣ್ಣನನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣನ ಮಾಸ್ ಅವತಾರ ಕಂಡು ಥ್ರಿಲ್ ಆಗಿದ್ದ ತಮಿಳು ಪ್ರೇಕ್ಷಕರು ಈ ಬಾರಿ ಕೂಡ ಅಷ್ಟೇ ಎಂಜಾಯ್ ಮಾಡುತ್ತಿದ್ದಾರೆ.