ಚಿಕ್ಕಬಳ್ಳಾಪುರ: ಜಿಂಕೆ ಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿ ಆರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಬಾಗೇಪಲ್ಲಿ ಪಟ್ಟಣದ ಹೊರವಲಯದ ಕೊಂಡಿರೆಡ್ಡಿಪಲ್ಲಿ ಗ್ರಾಮದ ಬಳಿ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಸಪ್ಪರಂಪಲ್ಲಿ ಗ್ರಾಮದ ಸಂದೇಶ್( ೩೨ ವರ್ಷ), ಕೃಷ್ಣಪ್ಪ ( ೩೩ ವರ್ಷ), ವೆಂಕಟೇಶ್( ೪೨ ವರ್ಷ) ಬಂಧಿತ ಆರೋಪಿಗಳಾಗಿದ್ದು, ಕೃಷ್ಣ ಮೃಗ ಬೇಟೆ ಹಾಗೂ ಮಾಂಸ ಮಾರಾಟ ಪ್ರಕಣದಲ್ಲಿ ಪ್ರಮುಖ ಆರೋಪಿಗಳಾದ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ ಎನ್.ಚಂದ್ರಶೇಖರ್( ೩೨ ವರ್ಷ), ಪುಟ್ಟಪರ್ತಿ ಗ್ರಾಮದ ನಾಗಪ್ಪ( ೫೨ ವರ್ಷ) ಪರಾರಿಯಾಗಿರುವುದಾಗಿ ತಿಳಿಸಿದ್ದು, ಒಟ್ಟು ಐದು ಜನ ಆರೋಪಿಗಳ ವಿರುದ್ದ ಬಾಗೇಪಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳಿಂದ ೧೫.೮ ಕೆ.ಜಿ ಜಿಂಕೆ ಮಾಂಸ ಮತ್ತು ಚರ್ಮ, ಮಾಂಸ ಕತ್ತರಿಸಲು ಬಳಸಲಾಗಿದ್ದ ಮಚ್ಚು ಮತ್ತು ಚಾಕು, ಮೂರು ಮೋಬೈಲ್, ೫೭೧೦ ರೂ ನಗದು ಹಾಗೂ ದ್ವಿಚಕ್ರ ವಾಹವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಜಿಂಕೆಗಳನ್ನು ಸಾಯಿಸಿ ತುಂಡು ತುಂಡಾಗಿ ಕತ್ತರಿಸಿದ ಮಾಂಸ ಮತ್ತು ಚರ್ಮ ತುಂಬಿದ ಚೀಲದೊಂದಿಗೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ, ಸಾರ್ವಜನಿಕರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಕೊಂಡಿರೆಡ್ಡಿಪಲ್ಲಿ ಗ್ರಾಮದ ರಸ್ತೆಯಲ್ಲಿ ಬಾಗೇಪಲ್ಲಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಾಗೇಪಲ್ಲಿ ಪೊಲೀಸರು ಮಾಂಸವನ್ನು ವಶಕ್ಕೆ ಪಡೆದುಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ವಲಯ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.