ಚಾಮರಾಜನಗರ: ಗ್ರಾಹಕರು ತಮ್ಮ ಖಾತೆಗಳಿಗೆ ಕಟ್ಟಿದ್ದ ಹಣವನ್ನು ಜಮೆ ಮಾಡದೇ ಲಕ್ಷಾಂತರ ರೂಪಾಯಿ ಹಣವನ್ನು ಗುಳುಂ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ SBI ಬ್ಯಾಂಕ್ ನಲ್ಲಿ ನಡೆದಿದೆ.
ಸಂತೇಮರಹಳ್ಳಿ ಶಾಖೆಯ ಎಸ್ ಬಿಐ ಬ್ಯಾಂಕ್ ನ ಕ್ಯಾಷ್ ಆಷೀಯರ್ ಮನೋರಂಜನ್ ಮುರ್ಮು ಎಂಬಾತ ಸ್ವಸಹಾಯ ಸಂಘಗಳ ಸಾಲ ಮರುಪಾವತಿ ಹಣವನ್ನು ಜಮೆ ಮಾಡದೇ ಗುಳುಂ ಮಾಡಿರುವ ಆರೋಪ ಕೇಳಿ ಬಂದಿದ್ದು, ಬರೋಬ್ಬರಿ 26,15,920 ರೂಪಾಯಿ ಹಣವನ್ನು ಕಬಳಿಸಿದ್ದಾನೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿ ಕೆಲವು ಸ್ವ-ಸಹಾಯ ಸಂಘಗಳು ಸಾಲ ಪಡೆದು ಸಾಲ ಮರುಪಾವತಿ ಮಾಡುತ್ತಿದ್ದರು. ಆದರೆ ಸಂಘಗಳು ಕಟ್ಟಿದ ಹಣವನ್ನು ಖಾತೆಗಳಿಗೆ ಜಮೆ ಮಾಡದೇ ಕೌಂಟರ್ ಚಲನ್ ನ್ನು ಗ್ರಾಹಕರಿಗೆ ಕೊಟ್ಟು ಯಾಮಾರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಮನೊರಂಜನ್ ಮುರ್ಮುಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.


