ಚಾಮರಾಜನಗರ: ನಿವೃತ್ತ ಶಿಕ್ಷಕನಿಂದ ಗಳಿಕೆ ರಜೆ ಹಣವನ್ನು ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿಆರ್‌ಪಿ ಮುನಿರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ 139 ದಿನಗಳ ಗಳಿಕೆ ರಜೆ (EL) ಹಣ ಮಂಜೂರು ಮಾಡಲು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬುಧವಾರ ಹನೂರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ ಲಂಚದ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಹಿತ್ ಕುಮಾರ್ ಹಾಗೂ ತಂಡ ಲಂಚ ಪಡೆಯುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಹಾಗೂ ಸಿ ಆರ್ ಪಿ ಮುನಿರಾಜು ಅವರನ್ನು ವಶಕ್ಕೆ ಪಡೆದು ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದು ಚಾಮರಾಜನಗರ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.