ಚಾಮರಾಜನಗರ: ಚಾಮರಾಜನಗರ ಲೋಕಸಭಾ ಎಸ್.ಸಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕಗ್ಗಂಟು ಇನ್ನೂ ಬಗೆ ಹರಿದಿಲ್ಲ. ಈ ನಡುವೆ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಸಿಎಂ ತವರು ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವನ್ನು ಶತಾಯ ಗತಾಯ ‘ಕೈ’ವಶ ಮಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಪಕ್ಷ ಬಲಿಷ್ಠ ಅಭ್ಯರ್ಥಿಗಾಗಿ ಇನ್ನೂ ಹುಡುಕಾಟ ನಡೆಸುತ್ತಲೇ ಇದೆ.
ಮಾಜಿ ಸಂಸದ ಧೃವನಾರಾಯಣ್ ಅವರ ಅಕಾಲಿಕ ಮರಣದ ನಂತರ ಬಿಜೆಪಿಗೆ ಟಕ್ಕರ್ ಕೊಡಬಲ್ಲ ಅಭ್ಯರ್ಥಿಯ ಕೊರತೆಯು ಕೈಪಾಳಯದಲ್ಲಿದೆ. ಹೀಗಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹೇರುತ್ತಿದೆ. ಆದರೆ ತಾವು ಚುನಾವಣೆ ಅಖಾಡಕ್ಕಿಳಿಯಲು ಹಿಂದೇಟು ಹಾಕುತ್ತಿರುವ ಹೆಚ್.ಸಿ ಮಹದೇವಪ್ಪ ತಮ್ಮ ಪುತ್ರ ಸುನೀಲ್ ಬೋಸ್ ಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಮೂಲಗಳ ವರದಿಯಂತೆ ಸುನೀಲ್ ಬೋಸ್ ಗೆಲುವು ಅಷ್ಟು ಸುಲಭವಾಗಿಲ್ಲ ಎಂಬುದನ್ನರಿತ ಕೈ ಪಾಳಯ ಸೂಕ್ತ ಅಭ್ಯರ್ಥಿಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಈಗಾಗಲೇ ಕಾಂಗ್ರೆಸ್ ನಲ್ಲಿ ಮಾಜಿ ಶಾಸಕ ನಂಜುಂಡಸ್ವಾಮಿ, ಮಾಜಿ ಸಂಸದ ದಿವಂಗತ ಧೃವನಾರಾಯಣ್ ಪುತ್ರ ದರ್ಶನ್ ಧೃವನಾರಾಯಣ್, ಹೆಚ್.ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹೆಸರುಗಳು ರೇಸ್ ನಲ್ಲಿದ್ದರೂ ಇನ್ನೂ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದೆ. ಈ ನಡುವೆ ಬಿಜೆಪಿ ನಿಯೋಜಿತ ಅಭ್ಯರ್ಥಿ ಮಾಜಿ ಶಾಸಕ ಬಾಲರಾಜ್ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಶ್ರೀಗಳ ಆಶೀರ್ವಾದ ಪಡೆದು, ಜೆಡಿಎಸ್ ಶಾಸಕ ಎಂ.ಆರ್ ಮಂಜುನಾಥ್ ಅವರ ಹನೂರು ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಿಂದಲೇ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಅದೇ ಗೆಲುವಿನ ನಾಗಾಲೋಟ ಮುಂದುವರೆಸಲು ಬಾಲರಾಜ್ ಈಗಾಗಲೇ ತಮ್ಮ ರಾಜಕೀಯ ಗುರುಗಳಾದ ದಿ.ರಾಜಶೇಖರಮೂರ್ತಿ ಹಾಗೂ ದಿ.ಧೃವನಾರಾಯಣ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಲಿಂಗಾಯತ ಹಾಗೂ ಎಸ್.ಸಿ ಮತ ಬ್ಯಾಂಕ್ ಗೆ ಲಗ್ಗೆ ಇಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಾಲರಾಜ್ ಪ್ರಚಾರ ಕಾರ್ಯದಲ್ಲಿ ಮಾಜಿ ಸಚಿವ ಎನ್ ಮಹೇಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು, ದಲಿತ ಸಮುದಾಯದ ಮುಖಂಡರು ಸಾಥ್ ನೀಡಿದ್ದಾರೆ.