ಚಾಮರಾಜನಗರ: ಗಡಿಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರ ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವಿಶೇಷ ಅಂದ್ರೆ ಎಣ್ಣೆ ಮಜ್ಜನ, ದೀಪಾವಳಿ ಜಾತ್ರೆ ಹಾಗು ಶಿವರಾತ್ರಿ ಪರಿಷೆ..
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತೀ ವರ್ಷ ವಿಶೇಷ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ, ” ಹಾಲಂಬಾಡಿ ಬೀದಿ ಚಂದ ಹಾಲರಿವೆಯಿಂದ.. ನಾಗಮಲೆಯ ಕೊಳಗಾ ಚಂದ ನಾಗರ ಹೆಡೆಯಿಂದ.. ಶಿವರಾತ್ರಿ ಪರಿಷೆ ಬಲುಚಂದ ಮಾದಪ್ಪ..” ಎಂದು ಹಾಡುತ್ತಾ ಭಕ್ತಿ ಪರವಶರಾಗಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುವ ಭಕ್ತರು ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.
ಚಳಿಗಾಲದ ಕೊನೆಯ ದಿನ, ಬೇಸಿಗೆಯ ಆರಂಭದ ದಿನವಾದ ಶಿವರಾತ್ರಿ ಹಬ್ಬ ಶೈವಾರಾಧಕರ ಪುಣ್ಯ ದಿನ. ಹೀಗಾಗಿ ಮಾದಪ್ಪನ ಬೆಟ್ಟಕ್ಕೆ ಸುಡು ಬಿಸಿಲ ಬೇಗೆಯಲ್ಲಿ ಬರುವ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳಿಗೆ ಸುಡು ಬಿಸಿಲ ತಾಪ ಕಡಿಮೆ ಮಾಡಲು ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ದಿನನಿತ್ಯ ದೇವಸ್ಥಾನದ ರಥದ ಹಾದಿಯಲ್ಲಿ ನೀರು ಚಿಮುಕಿಸುವ ಕಾರ್ಯ ಸಾಗಿದ್ದು, ಮಾದಪ್ಪನ ಬೆಟ್ಟ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ಈಗಾಗಲೇ ಲಕ್ಷಗಟ್ಟಲೆ ಲಡ್ಡು ಪ್ರಸಾದ ತಯಾರಾಗಿದೆ, ದಾಸೂಹ ಭವನ ದುರಸ್ತಿಗೊಂಡಿದ್ದು, ಭಕ್ತರಿಗೆ ನಿರಂತರವಾಗಿ ದಾಸೂಹಕ್ಕೆ ಸಕಲ ಏರ್ಪಾಡು ಮಾಡಲಾಗಿದೆ, ವಾಹನ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ದ್ವಿಚಕ್ರ ಹಾಗು ಅಟೋ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ, ಭಕ್ತಾದಿಗಳು ತಂಗಲು ವಸತಿ ಗೃಹಗಳ ವ್ಯವಸ್ಥೆ, ಸ್ನಾನ ಗೃಹಗಳ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಬೆಟ್ಟದ ಪರಿಸರಕ್ಕೆ ಹಾನಿಯಾಗದಂತೆ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.