ಬೆಂಗಳೂರು: ಯದುವೀರ ಒಡೆಯರ್ ಅವರು ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮೈಸೂರಿನಲ್ಲಿ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಹಿರಿಯರು ಮತ್ತು ವಿಧಾನಪರಿಷತ್ ಸದಸ್ಯರೂ ಆದ ವಿಶ್ವನಾಥ್ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜವಂಶಸ್ಥರಾದ ಯದುವೀರ ಒಡೆಯರ್ ಅವರು ಸಹ ಇದ್ದರು. ವಿಶ್ವನಾಥ್ ಅವರು ಯದುವೀರ ಒಡೆಯರ್ ಅವರಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿದ್ದಾರೆ. ಯದುವೀರ ಒಡೆಯರ್ ಅವರಿಗೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ಕೊಡಬೇಕೆಂದು ಹೇಳಿದ್ದಾರೆ ಎಂದರು.
ಮಹಾರಾಜರ ಕಾಲದಲ್ಲಿ ದಲಿತ ಸಮುದಾಯಗಳು, ಪರಿಶಿಷ್ಟ ಜಾತಿ, ಪಂಗಡ ಸೇರಿ ಎಲ್ಲ ಸಮುದಾಯಗಳಿಗೂ ನ್ಯಾಯ ಕೊಟ್ಟಿದ್ದರು. ರಾಜವಂಶದ ಮನೆತನವು ಬಡವರಿಗೆ ಶಕ್ತಿಯನ್ನು ನೀಡಿದೆ. ಪಕ್ಷಾತೀತ ಬೆಂಬಲವನ್ನು ಅವರಿಗೆ ನೀಡಬೇಕೆಂದು ವಿಶ್ವನಾಥರವರು ಹೇಳಿದ್ದಾರೆ ಎಂದು ವಿವರಿಸಿದರು.
ಸುಮಲತಾ ಅವರ ನಿರ್ಧಾರವನ್ನು ನಿರೀಕ್ಷೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಸುಮಲತಾ ಅವರು ಪ್ರಧಾನಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಅಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ನಡುವೆ ಸುಮಲತಾ ಅವರ ತೀರ್ಮಾನ ಸ್ವಾಗತಾರ್ಹ ಎಂದು ತಿಳಿಸಿದರು.
ಸಿಎಂ ಹೇಳಿಕೆ ಹಾಸ್ಯಾಸ್ಪದ..
ಮುಖ್ಯಮಂತ್ರಿಗಳು ಪದೇಪದೇ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನವೇ ಬಂದಿಲ್ಲ ಎಂಬ ಅವರ ಮಾತು ಅವರಿಗೆ ಶೋಭೆ ತರುವಂಥದ್ದಲ್ಲ. ಯುಪಿಎ ಸರಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ 10 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಒಂದೂವರೆ ಲಕ್ಷ ಕೋಟಿ ಹಣವಷ್ಟೇ ಬಂದಿತ್ತು. ಪ್ರಧಾನಿ ಮೋದಿಜೀ ಅವರ 10 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ 4 ಲಕ್ಷ ಕೋಟಿಗೂ ಹೆಚ್ಚು ಅನುದಾನ ಲಭಿಸಿದೆ. ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟಿದ್ದಾರೆ. ಇದರ ನಡುವೆಯೂ ಸಹ ಮುಖ್ಯಮಂತ್ರಿಗಳ ಈ ಹೇಳಿಕೆ ಹಾಸ್ಯಾಸ್ಪದ ಎಂದು ವಿಜಯೇಂದ್ರ ಅವರು ಟೀಕಿಸಿದರು.
ಬರಗಾಲದ ಸಂದರ್ಭದಲ್ಲಿ ಮೋದಿಜೀ ಅವರ ಮೇಲೆ ಮುಖ್ಯಮಂತ್ರಿಗಳು ಪದೇಪದೇ ಆರೋಪ ಮಾಡುತ್ತಿದ್ದಾರೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ರೈತರ ಕುರಿತು ನಿಮಗೆ ಕರುಣೆ ಬರಲಿಲ್ಲವೇಕೆ ಎಂದು ಪ್ರಶ್ನಿಸಿದರು. ರೈತರ ಬಗ್ಗೆ ಕಿಂಚಿತ್ತೂ ಅನುಕಂಪ ಬರಲಿಲ್ಲವೇ ಎಂದು ಕೇಳಿದರು. ಈ ಸರಕಾರ ರೈತರು ಮತ್ತು ಜನರಿಗೆ ಶಾಪವಾಗಿ ಪರಿವರ್ತನೆಗೊಂಡಿದೆ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈಗಲಾದರೂ ಎಚ್ಚತ್ತುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸ್ಪಷ್ಟ ಬಹುಮತದ ನಿಮ್ಮದೇ ಸರಕಾರ ರಾಜ್ಯದಲ್ಲಿದೆ. ರೈತರಿಗೆ ಸಮರ್ಪಕ ನ್ಯಾಯ ಕೊಡಿ ಎಂದು ಕೈಮುಗಿದು ಮನವಿ ಮಾಡುವುದಾಗಿ ಹೇಳಿದರು.