ಬೆಂಗಳೂರು: ಏಪ್ರಿಲ್ 3 ರಂದು ಮಂಡ್ಯದಲ್ಲಿಯೇ ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ಜೆಪಿ ನಗರ ನಿವಾಸದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ರಾಜಕೀಯ ಅನುಭವ ಇಲ್ಲದ ಸಮಯದಲ್ಲಿ ಜನರು ಬಂದರು ಇದೇ ನನಗೆ ಆಶೀರ್ವಾದ, ಹಿಂದಿನ ಚುನಾವಣೆಯಲ್ಲಿ ಯಾರೂ ದೊಡ್ಡ ದೊಡ್ಡ ರಾಜಕಾರಣಿಗಳು ಇರಲಿಲ್ಲ. ಅಂಬಿ ಜೊತೆಗಿದ್ದವರೇ ನನ್ನ ಜೊತೆ ನಿಂತರು. ಅಂಬಿ ಮೇಲಿನ ಪ್ರೀತಿಯನ್ನು ನನಗೆ ಕೊಟ್ಟರು. ನನಗೆ ನೋವಾಗಿರಬಹುದು ಕಷ್ಟವಾಗಿರಬಹುದು, ಕಣ್ಣೀರು ಹಾಕಿದ ದಿನಗಳೂ ಇವೆ. ನನ್ನ ಸ್ವಾರ್ಥ ನೋಡಿ ನಿರ್ಧಾರ ಮಾಡಬಹುದಿತ್ತು. ನನ್ನ ಭವಿಷ್ಯ, ಮಗನ ಭವಿಷ್ಯ ನೋಡುವುದೇ ಮುಖ್ಯ ಆಗಿದ್ದರೆ ನನ್ನ ರಾಜಕೀಯ ನಡೆ ಬೇರೆಯೇ ಆಗಿರುತ್ತಿತ್ತು. ಆದರೆ ಮೊದಲ ದಿನದ ಬದ್ದತೆಯೇ ಇವತ್ತೂ ಇದೆ. ನಾನು ನುಡಿದಂತೆ ನಡೆದುಕೊಂಡು ಬಂದಿದ್ದೇನೆ. ಜನರಿಗೂ ಕೊಟ್ಟ ವಾಗ್ದಾನದಲ್ಲಿ ತಪ್ಪು ಹೆಜ್ಜೆ ಇಟ್ಟಿಲ್ಲ ಎಂದರು.
ನನಗೆ ಸಿಕ್ಕ ಅವಕಾಶದಲ್ಲಿ ಪ್ರಾಮಾಣಿಕವಾಗಿ, ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ಮಂಡ್ಯದ ಘನತೆಯನ್ನು ಸಂಸತ್ತಿನಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಬೇರೆ ಕಡೆ ಅವಕಾಶ ನೀಡುವ ಭರವಸೆ ನೀಡಿದರೆ ಯಾರೂ ಬೇಡ ಎನ್ನಲ್ಲ. ಆದರೆ ನಾನು ಗೆದ್ದರೂ ಸೋತರೂ ಮಂಡ್ಯ ಎಂದಿದ್ದೇನೆ. ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ಮಂಡ್ಯ ಎಂದರೆ ಅದೊಂದು ಭಾವನೆ, ಪ್ರೀತಿ ಇದ್ದಂತೆ, ಅಲ್ಲಿನ ಜನರ ಪ್ರೀತಿ ಮುಖ್ಯ ಹಾಗಾಗಿ ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರ ಬೇಡ ಎಂದಿದ್ದೆ. ಮುಂದೆಯೂ ಮಂಡ್ಯ ಬಿಟ್ಟು ಬೇರೆ ಕಡೆ ರಾಜಕಾರಣ ಮಾಡಲ್ಲ ಎಂದರು.
ಕಳೆದ ಬಾರಿಗಿಂತ ಹೆಚ್ಚಿನ ಸವಾಲು ಈ ಬಾರಿ ಇದೆ. ಕ್ಷೇತ್ರದ ಜನರ ಮನಸ್ಸು ನೋಯಿಸಿ ಯಾವುದೇ ನಿರ್ಧಾರ ಕೈಗೊಳ್ಳಲ್ಲ. ಅಧಿಕಾರ ಬರುತ್ತೆ ಹೋಗುತ್ತೆ, ನಮ್ಮ ರಾಜಕೀಯ ನಿರ್ಧಾರ ಮಂಡ್ಯದ ಜೊತೆ ಇರಲಿದೆ. ನಾನು ಇದರ ಬಗ್ಗೆ ಚರ್ಚೆ ಮಾಡಬೇಕು. ನಿಮ್ಮನ್ನು ನೋಯಿಸುವ ನಿರ್ಧಾರ ತೆಗೆದುಕೊಳ್ಳಲ್ಲ. ನಮ್ಮನ್ನು ನಂಬಿ ಲಕ್ಷಾಂತರ ಜನ ಇದ್ದಾರೆ. ಎರಡು ದಿನಗಳ ಕಾಲಾವಕಾಶ ನೀಡಿ ನಾನು ಆಪ್ತರ ಜೊತೆ ಚರ್ಚಿಸಿ ಮಂಡ್ಯದಲ್ಲಿ ಮೂರನೇ ತಾರೀಖಿಗೆ ಬಂದು ಅಲ್ಲಿಯೇ ಸಭೆ ನಡೆಸಿ ಅಲ್ಲಿಯೇ ನಾನು ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅಭಿಷೇಕ್ ಅಂಬರೀಷ್, ನಮ್ಮ ಬಳಿ ಹೆಚ್ಚಿನ ಸಮಯ ಇಲ್ಲ, ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ, ಅಂಬಿ ಮಗನಾಗಿ ಹೇಳುತ್ತೇನೆ ಮಂಡ್ಯಬಿಟ್ಟು ನಾವು ಎಲ್ಲೂ ಹೋಗಲ್ಲ, ಎಲ್ಲರೂ ನನ್ನ ಮಂಡ್ಯದ ಗಂಡು ಅಂವರೀಷ್ ಮಗ ಎಂದೇ ಗುರುತಿಸುತ್ತಾರೆ, ಎಲ್ಲರ ಅಭಿಪ್ರಾಯ ಪಡೆದೇ ನಮ್ಮ ತಾಯಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಚುನಾವಣೆಗೆ ನಿಲ್ಲಿ ಸುಮಲತಾ ಅಕ್ಕಾ…
ಇನ್ನು ಈ ಸಭೆಯಲ್ಲು ಅಭಿಮಾನಿಗಳಿಂದ ನೀವು ಚುನಾವಣೆಗೆ ನಿಲ್ಲಿ ಅಕ್ಕಾ ಎನ್ನುವ ಆಗ್ರಹ ಕೇಳಿಬಂದಿತು, ನಾವು ನಿಮ್ಮ ಮನೆಯಲ್ಲೇ ಇರುತ್ತೇನೆ, ನೀವು ಚುನಾವಣೆಗೆ ನಿಲ್ಲಿ, ನಾವು ನಿಮ್ಮ ಜೊತೆ ನಿಲ್ಲುತ್ತೇವೆ, ನಮ್ಮನ್ನು ಬೇರೆಯವರ ಮನೆಗೆ ಕಳಿಸಬೇಡಿ ಎಂದು ಮನವಿ ಮಾಡಿದರು.
ನಾವು ನಿಮಗೆ ಮಾತ್ರ ಮತ ಹಾಕುತ್ತೇವೆ, ಬೇರೆ ಯಾವ ಪಕ್ಷಕ್ಕೂ ಮತ ಹಾಕಲ್ಲ. ಸುಮಲತಾ ಅಂಬರೀಷ್ ಗೆ ಮತ ಹಾಕುತ್ತೇವೆ ಅವರು ಚುನಾವಣೆಗೆ ನಿಲ್ಲದೇ ಇದ್ದರೆ ನೋಟಾಗೆ ಮಾತ್ರ ನಮ್ಮ ಮತ ಎಂದರು.