Wednesday, April 30, 2025
24.6 C
Bengaluru
LIVE
ಮನೆರಾಜ್ಯಮೇಕೆದಾಟು ಯೋಜನೆಗೆ ಬೆಂಬಲ ನೀಡಿರುವ ದೇವೇಗೌಡರಿಗೆ ಧನ್ಯವಾದಗಳು: ರಮೇಶ್ ಬಾಬು

ಮೇಕೆದಾಟು ಯೋಜನೆಗೆ ಬೆಂಬಲ ನೀಡಿರುವ ದೇವೇಗೌಡರಿಗೆ ಧನ್ಯವಾದಗಳು: ರಮೇಶ್ ಬಾಬು

ಬೆಂಗಳೂರು: “ಮೇಕೆದಾಟು ಯೋಜನೆಗೆ ಬೆಂಬಲ ನೀಡಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ   ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಧನ್ಯವಾದ ತಿಳಿಸಿದರು. ಈ ಯೋಜನೆಗೆ ವಿರೋಧ ಮಾಡುತ್ತಿರುವ ಬಿಜೆಪಿಯ ಆರ್. ಅಶೋಕ್ ಹಾಗೂ ಇತರ ನಾಯಕರು ದೇವೇಗೌಡರಿಂದ ಸಲಹೆ ಪಡೆಯಲಿ” ಎಂದರು.

“ಮೇಕೆದಾಟು ಯೋಜನೆ ಜಾರಿಗೆ ಡಿ.ಕೆ.ಶಿವಕುಮಾರ್ ಅವರು ಮತ್ತು ಕಾಂಗ್ರೆಸ್ ಪಕ್ಷ ದೊಡ್ಡ ಹೋರಾಟ ಮಾಡಿತ್ತು. ಈ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಈ ಮಧ್ಯೆ ಹಿರಿಯರಾದ ದೇವೇಗೌಡರು ಈ ಯೋಜನೆ ಪರವಾಗಿ ಮಾತನಾಡಿದ್ದಾರೆ. ಪಕ್ಷಾತೀತವಾಗಿ ಈ ಯೋಜನೆ ಪರವಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ. ಅವರ ಈ ಬೆಂಬಲಕ್ಕೆ ಧನ್ಯವಾದಗಳು, ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಸ್ವಾಗತಿಸುತ್ತೇನೆ ಎಂದರು.

ಕುಮಾರಸ್ವಾಮಿ ಅವರು ಸಹ ಶೀಘ್ರ ಗುಣಮುಖರಾಗಲಿ. ಸುಮಲತಾ ಅವರನ್ನು ಅಕ್ಕ ಎಂದು ಕುಮಾರಸ್ವಾಮಿ ಕರೆದಿದ್ದಾರೆ. ಅವರ ಪರವಾಗಿ ಮಾತನಾಡುತ್ತಿದ್ದಾರೆ. ಸುಮಲತಾ ಅವರನ್ನು ಎಂಎಲ್ ಸಿ ಮಾಡಿ ಎಂದು ಬಿಜೆಪಿಗೆ ಸಲಹೆ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ 7 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದರು. ನಾವು ಯಾವುದೇ ಪಕ್ಷಗಳ ಮನೆ ಬಾಗಿಲಿಗೆ ಹೋಗಬಾರದು ಅವರೇ ನಮ್ಮ ಬಳಿ ಬರಬೇಕು ಎಂದು ದೇವೇಗೌಡರು ಪದೇ, ಪದೇ ಹೇಳುತ್ತಿದ್ದರು. ಈಗ ಪ್ರತಿದಿನ ಯಡಿಯೂರಪ್ಪ ಅವರ ಮನೆ ಬಾಗಿಲು ತಟ್ಟುವ ಪರಿಸ್ಥಿತಿ ಉಂಟಾಗಿದೆ.

ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಹಿಂದೆ ಲೋಕಶಕ್ತಿ ಪಕ್ಷ ಸ್ಥಾಪಿಸಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು 3 ಸ್ಥಾನಗಳನ್ನು ಗೆದ್ದರು. ಕರ್ನಾಟಕದಲ್ಲಿ ಈ ಪಕ್ಷ ಇತ್ತು ಎಂಬುದೇ ಜನಕ್ಕೆ ಮರೆತು ಹೋಗಿದೆ. ಇದೇ ಪರಿಸ್ಥಿತಿ ಜೆಡಿಎಸ್ ಪಕ್ಷಕ್ಕೆ ಖಂಡಿತಾ ಬರಲಿದೆ. ಜೆಡಿಎಸ್ ಕರ್ನಾಟಕದಿಂದ ಕಣ್ಮರೆ ಆಗುತ್ತದೆ. ಕೇವಲ ಮೂರು ಸ್ಥಾನಕ್ಕೆ ಅಂಗಲಾಚುತ್ತಿದೆ. ಸಿ.ಎಸ್.ಪುಟ್ಟರಾಜು ಅವರನ್ನೇ ಅಭ್ಯರ್ಥಿ ಎಂದು ಹೇಳಿ ಈಗ ನಾನೇ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ ಕುಮಾರಸ್ವಾಮಿ. ಅಂದರೆ ಇವರಿಗೆ ಕುಟುಂಬ ಮಾತ್ರ ಮುಖ್ಯ. 2013ರ ಲೋಕಸಭಾ ಉಪಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಬಿಜೆಪಿ ಬೆಂಬಲದಿಂದ ಜೆಡಿಎಸ್ ಸ್ಪರ್ಧೆ ಮಾಡಿತ್ತು. ಆದರೆ ಗೆದಿದ್ದು ಮಾತ್ರ ಕಾಂಗ್ರೆಸ್ ಪಕ್ಷ. ಕನಿಷ್ಠ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜೆಡಿಎಸ್ ಪಕ್ಷದ ಆತ್ಮ ವಂಚನೆಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments