Tuesday, January 27, 2026
26.7 C
Bengaluru
Google search engine
LIVE
ಮನೆ#Exclusive NewsTop Newsಚೆನ್ನೈನಲ್ಲಿ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಮಾಡಲು ಆರ್.ಅಶೋಕ ಸಲಹೆ

ಚೆನ್ನೈನಲ್ಲಿ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಮಾಡಲು ಆರ್.ಅಶೋಕ ಸಲಹೆ

ಬೆಂಗಳೂರು: ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ತಮಿಳುನಾಡಿಗೆ ಕಾಂಗ್ರೆಸ್ಸಿನ 136 ಜನ ಶಾಸಕರನ್ನು ಕರೆದುಕೊಂಡು ಹೋಗಿ ಅಲ್ಲೇ ಕಾಫಿ ಕುಡಿದು ಚೆನ್ನೈನಲ್ಲಿ ಡಿಎಂಕೆ ಕಚೇರಿ ಮುಂದೆ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸಲಹೆ ನೀಡಿದರು.

ನಮ್ಮ ಹಣ ನಮ್ಮ ಹಕ್ಕು ಎಂದು ಘೋಷಣೆಯೊಂದಿಗೆ ದೆಹಲಿಯಲ್ಲಿ 136 ಕಾಂಗ್ರೆಸ್ ಶಾಸಕರು ಹೋರಾಟ ಮಾಡಿದ್ದರು. ಅದೇ ಮಾದರಿಯಲ್ಲಿ ಚೆನ್ನೈನಲ್ಲಿ ಹೋರಾಟ ಮಾಡುವಂತೆ ಸಲಹೆ ಕೊಟ್ಟರು.
ರಾಜ್ಯದ ಹಿತ ಮುಖ್ಯವೇ ಅಥವಾ ಇಂಡಿ ಮೈತ್ರಿ ಮುಖ್ಯವೇ ಎಂಬ ಪರ್ವಕಾಲದಲ್ಲಿ ಕಾಂಗ್ರೆಸ್ಸಿಗರು ಇದ್ದಾರೆ ಎಂದು ತಿಳಿಸಿದರು. ರಾಜ್ಯದ ಜನತೆ ನಿಮ್ಮನ್ನು ನಂಬಬೇಕಿದ್ದರೆ, ನುಡಿದಂತೆ ನಡೆಯುವವರು ಎಂದು ತೋರಿಸುವುದಾದರೆ ಮೈತ್ರಿ ಮುಖ್ಯವೇ ರಾಜ್ಯದ ಹಿತ ಮುಖ್ಯವೇ ಎಂದು ತೀರ್ಮಾನ ಮಾಡಿ ಎಂದು ಆಗ್ರಹಿಸಿದರು.

ಹಿಂದೆ ಮಹದಾಯಿ ಸಂಬಂಧ ಗೋವಾದಲ್ಲಿ ಸೋನಿಯಾ ಗಾಂಧಿಯವರು ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಡಿಎಂಕೆ ಮುಖಾಂತರ ಈ ಮಾತನ್ನಾಡಿಸಿದ್ದಾರೆ ಎಂದು ಆಕ್ಷೇಪ ಸೂಚಿಸಿದರು. ವಿಪಕ್ಷದ ನಾಯಕರು ರಾಜ್ಯದ ಹಿತದೃಷ್ಟಿಯಿಂದ ಸಲಹೆ ನೀಡಿದರೆ ನಾನು ಅದನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ನಾನು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರಿಗೆ ಒಳ್ಳೆಯ ಸಲಹೆ ನೀಡುತ್ತೇನೆ ಎಂದು ತಿಳಿಸಿದರು. ಇವರಲ್ಲಿ ಯಾರು ಫಸ್ಟ್ ಯಾರು ಸೆಕೆಂಡ್ ಎಂಬ ಗೊಂದಲದಲ್ಲಿ ನಾನಿದ್ದೇನೆ. ಯಾವಾಗ ಯಾರು ಸಿಎಂ ಎಂದೇ ಗೊತ್ತಾಗುವುದಿಲ್ಲ. ಸಿಎಂ, ಸೂಪರ್ ಸಿಎಂ, ಭಾವಿ ಸಿಎಂ, ಶ್ಯಾಡೋ ಸಿಎಂ ಇರುವುದಾಗಿ ಪ್ರಧಾನಿಯವರೇ ಹೇಳಿದ್ದಾರೆ ಎಂದು ಗಮನ ಸೆಳೆದರು.

ಕರ್ನಾಟಕದಲ್ಲಿ ವೀಕ್ ಸಿಎಂ ಇದ್ದಾರೆ; ವೀಕ್ ಗವರ್ನಮೆಂಟ್ ಇದೆ ಎಂದ ಅವರು, ಈ ದೌರ್ಬಲ್ಯವನ್ನು ಉಪಯೋಗಿಸಿ ಇಂಡಿ ಒಕ್ಕೂಟದ ಮುಖ್ಯ ಪಾಲುದಾರ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿದೆ ಎಂದು ಆಕ್ಷೇಪಿಸಿದರು.
ಇದು ಹೇಳಿಕೆಯಲ್ಲ; ಇದು ಪ್ರಣಾಳಿಕೆಯಲ್ಲಿರುವ ವಿಚಾರ ಎಂದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿ ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯಡಿ ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಮಾಡಿದ್ದರು. ಇದು ಬಹಳ ಗಂಭೀರ ವಿಚಾರ; ಪ್ರಾಣ ತ್ಯಾಗ ಮಾಡಿಯಾದರೂ ಈ ಯೋಜನೆ ಮಾಡುವುದಾಗಿ ತಿಳಿಸಿದ್ದರು. ಈಗ ಅವರದೇ ಕ್ಲೋಸ್ ಫ್ರೆಂಡ್, ನಿಯರೆಸ್ಟ್ ಆಂಡ್ ಡಿಯರೆಸ್ಟ್ ಫ್ರೆಂಡ್ ಸ್ಟಾಲಿನ್ ಈ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದ ವ್ಯಂಗ್ಯವಾಡಿದರು. ಇದೇವೇಳೆ ಅವರು ಶಿವಕುಮಾರ್- ಸ್ಟಾಲಿನ್, ಸಿದ್ದರಾಮಯ್ಯ- ಸ್ಟಾಲಿನ್ ಜೊತೆಗಿರುವ ಭಾವಚಿತ್ರಗಳನ್ನೂ ಪ್ರದರ್ಶಿಸಿದರು.

ಏನಿಲ್ಲ ಏನಿಲ್ಲ- ಬೆಂಗಳೂರಿನಲಿ ನೀರಿಲ್ಲ.. ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ವೇಳೆ ಅಲ್ಲಿ ಸ್ನಾನ ಮಾಡಿದ್ದರು ಎಂದು ಫೋಟೊ ಪ್ರದರ್ಶಿಸಿದ ಅವರು, ಈಗ ಬೆಂಗಳೂರಿನಲ್ಲಿ ಸ್ನಾನಕ್ಕಲ್ಲ. ಮುಖ ತೊಳೆದುಕೊಳ್ಳಲೂ ನೀರಿಲ್ಲ. ನೀರಿನ ಕೊರತೆ ಪರಿಣಾಮವಾಗಿ ಬೆಂಗಳೂರಿನ ಜನರು ಗುಳೆ ಹೋಗುತ್ತಿದ್ದಾರೆ. ನಾನು ಬೆಂಗಳೂರಿನ ಒಬ್ಬ ನಿವಾಸಿ. ಕಳೆದ 50 ವರ್ಷಗಳಿಂದ ನೋಡುತ್ತಿದ್ದೇನೆ. ಯಾವತ್ತೂ ಈ ರೀತಿ ಆಗಿಲ್ಲ. ಏನಿಲ್ಲ ಏನಿಲ್ಲ- ನೀರಿಲ್ಲ ನೀರಿಲ್ಲ ಎಂಬ ಸ್ಥಿತಿ ಬೆಂಗಳೂರಿನದು. ಜನರು ಗುಳೆ ಹೋಗುತ್ತಿದ್ದಾರೆ ಎಂದು ಆರ್.ಅಶೋಕ ಅವರು ಬೇಸರ ವ್ಯಕ್ತಪಡಿಸಿದರು.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments