ಬೆಂಗಳೂರಿನಲ್ಲಿ ತೆರಿಗೆ ಪಾವತಿಗಾಗಿ ನಾನಾ ಕಸರತ್ತು ಮಾಡುತ್ತಿರುವ ಬಿಬಿಎಂಪಿ ಹೇಗಾದರೂ ಮಾಡಿ ಆಸ್ತಿ ತೆರಿಗೆ ಪಡೆಯಲೇಬೇಕೆಂದು ಇದೀಗ ಹೊಸ ಅಸ್ತ್ರ ಪ್ರಯೋಗಿಸಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ದತಿಯಲ್ಲಿ ಪಾಲಿಕೆಗೆ ಕೋಟಿಗಟ್ಟಲೇ ವಂಚನೆ ಮಾಡುತ್ತಿದ್ದ ಆಸ್ತಿ ಮಾಲೀಕರಿಗೆ ಪಾಲಿಕೆ ದಂಡಾಸ್ತ್ರ ಪ್ರಯೋಗ ಮಾಡಿತ್ತು. ತೆರಿಗೆ ಪಾವತಿಸದೆ ಇದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿ ಇತ್ತೀಚೆಗೆ 6 ಲಕ್ಷ ಆಸ್ತಿ ಮಾಲೀಕರಿಗೆ ನೋಟೀಸ್ ನೀಡಿತ್ತು. ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಆಸ್ತಿ ಮಾಲೀಕರ ಕಟ್ಟಡವನ್ನ ಸೀಜ್ ಕೂಡ ಮಾಡಿತ್ತು. ರಾಕ್ ಲೈನ್ ಮಾಲ್ ಸೇರಿದಂತೆ ಹಲವು ಮಾಲ್ ಗಳಿಗೆ ನೋಟಿಸ್ ನೀಡಿ ಸೀಜ್ ಮಾಡಿ ಶಾಕ್ ನೀಡಿತ್ತು. ಆದ್ರೆ ಪಾಲಿಕೆ ಈ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಹೊಸ ಅಸ್ತ್ರ ಪ್ರಯೋಗಿಸಲು ಪಾಲಿಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಅನ್ನು ಆನ್‌ಲೈನ್ ಮೂಲಕ ಪಾವತಿಸಲು ಅವಕಾಶ ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಒಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರವು ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಯೋಜನೆಯ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ಸಾಫ್ಟ್ ವೇರ್ ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ನಾಗರಿಕರು ಈಗ ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಪಡೆದು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.
ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ OTS ಆದೇಶವನ್ನು ಜಾರಿಗೆ ತಂದಿದ್ದು, ನಾಗರೀಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇ 50 ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆಗೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಟ 5-ವರ್ಷಗಳ ಮಿತಿ ಪ್ರಯೋಜನವನ್ನು ತಕ್ಷಣವೇ ಪಡೆಯಬಹುದಾಗಿದೆ. ಪಾಲಿಕೆಯ ಅಧಿಕೃತ ವೆಬ್ ಸೈಟ್ https://bbmptax.karnataka.gov.inಗೆ ಭೇಟಿ ನೀಡಿ, ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಆನ್‌ಲೈನ್‌ನಲ್ಲಿ ಪಡೆದು ಪಾವತಿಸಬಹುದಾಗಿದೆ.