ಬೆಂಗಳೂರು : ಬೆಂಗಳೂರು ನಗರದ ಸಾರಿಗೆ ಕೊಂಡಿ ಎನ್ನಿಸಿಕೊಂಡಿರೋ ಓಲಾ ಉಬರ್ ಆಗಾಗ ಸುದ್ದಿಯಾಗ್ತನೇ ಇರುತ್ತೆ. ರಾತ್ರಿ ಹಗಲು ಸಿಟಿ ಜನ್ರ ಸಾರಿಗೆ ಮಿತ್ರಿನಂತಿರೋ ಈ ಟ್ಯಾಕ್ಸಿಗಳು, ಆ್ಯಪ್ ಆಧಾರಿತ ಸೇವೆಯ ಜಾಗದಲ್ಲಿ ಸಿಲುಕಿ ಒದ್ದಾಡ್ತಿವೆ. ನಿಗದಿಯ ಹೆಚ್ಚಿನ ಹಣ ವಸೂಲಿಗಿಳಿದಿರೋ ಆ್ಯಪ್ ಗಳ ವಿರುದ್ದ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಈ ಆಗ್ರಿಗೇಟರ್ ಸಂಸ್ಥೆಗಳಿಗೆ ಮೂಗುದಾರ ಹಾಕಲು ಸರ್ಕಾರ ಹೊರಟಿದೆ. ಹಲವು ದಿನದಿಂದ ಸರ್ಕಾರ ಹಾಗೂ ಅಗ್ರಿಗೇಟರ್ ಕಂಪನಿಗಳ ನಡುವೆ ದರ ನಿಗದಿ ಹಗ್ಗಜಗ್ಗಾಟ ನಡೆಯುತ್ತಿತ್ತು. ಆದ್ರೆ ಸರ್ಕಾರ ದರ ನಿಗದಿ ಮಾಡಿದ್ರೂ ಓಲಾ ಉಬರ್ ಕಂಪನಿಗಳು ಮನಸ್ಸೋ ಇಚ್ಚೆ ದರಗಳನ್ನು ನಿಗದಿಪಡಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಇವರ ಮಹಾನ್ ಕಳ್ಳಾಟಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ.
ಆರಂಭದ ದಿನಗಳಲ್ಲಿ ಗ್ರಾಹಕರಿಗೆ ಮತ್ತು ಟ್ಯಾಕ್ಸಿ ಚಾಲಕರಿಬ್ಬರಿಗೂ ಭರಪೂರ ಕೊಡುಗೆಗಳನ್ನು ನೀಡುತ್ತಿದ್ದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿಗಳು ಬರುಬರುತ್ತಾ ಇಬ್ಬರ ಜೇಬಿಗೂ ಕತ್ತರಿ ಹಾಕುವುದನ್ನೇ ರೂಢಿ ಮಾಡಿಕೊಂಡಿವೆ. ಇದರೊಂದಿಗೆ ಇತರೆ ಟ್ಯಾಕ್ಸಿ ಚಾಲಕರೂ ದರ ವಿಚಾರದಲ್ಲಿ ಕಳ್ಳಾಟಕ್ಕೆ ಮುಂದಾದಾಗ ಗ್ರಾಹಕರು ಅಕ್ಷರಶಃ ಹೈರಾಣಾದರು. ಇದಕ್ಕೆ ಕಡಿವಾಣ ಹಾಕಲು ಇದೀಗ ಸಾರಿಗೆ ಇಲಾಖೆಯು ಏಕರೂಪ ಪ್ರಯಾಣದರದ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಈಗಾಗಲೇ ಈ ವಿಚಾರವಾಗಿ ಸರ್ಕಾರಕ್ಕೆ ಪ್ರಸ್ತಾವವನ್ನೂ ಸಲ್ಲಿಸಿದೆ.
ಬೆಂಗಳೂರು ನಗರದಲ್ಲಿ ಸುಮಾರು 2.22 ಲಕ್ಷ ಕ್ಯಾಬ್ಗಳಿದ್ದು, ನಿತ್ಯ 80 ಸಾವಿರಕ್ಕೂ ಹೆಚ್ಚು ಟ್ರಿಪ್ ಸಂಚಾರವಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳ ಪ್ರಯಾಣ ದರವು ದಿನದ 24 ಗಂಟೆಯೂ ಒಂದೇ ರೀತಿ ಇರುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತಿದೆ. ಬುಕ್ಕಿಂಗ್ ಹೆಚ್ಚಿರುವಾಗ ಮತ್ತು ಬುಕ್ಕಿಂಗ್ ಕಡಿಮೆ ಇರುವ ಸಂದರ್ಭದಲ್ಲಿ ಬೇರೆ ಬೇರೆ ದರ ವಸೂಲಿ ಮಾಡಲಾಗುತ್ತಿದೆ. ಬಹುತೇಕ ಅಗ್ರಿಗೇಟರ್ ಕಂಪನಿಗಳು ಬೇಡಿಕೆ ದರ ಏರಿಕೆ ಹೆಸರಿನಲ್ಲಿ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಹೀಗಾಗಿ ಏಕರೂಪದ ದರ ನಿಗದಿಗೆ ಸಾರಿಗೆ ಇಲಾಖೆ ಮುಂದಾಗಿದೆ.
ಟ್ಯಾಕ್ಸಿ ಸೇವೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ ಸಂಬಂಧ ಸಾರ್ವಜನಿಕರಿಂದ ವ್ಯಾಪಕ ದೂರು ಬಂದಿವೆ. ಹೀಗಾಗಿ, ಅಗ್ರಿಗೇಟರ್ ಕಂಪನಿಗಳು ಹಾಗೂ ಇತರೆ ಟ್ಯಾಕ್ಸಿ ಚಾಲಕರ ಆಟಾಟೋಪಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಏಕರೂಪ ಪ್ರಯಾಣ ದರ ನಿಗದಿಪಡಿಸಲು ನಿರ್ಧರಿಸಿದೆ.ಏಕರೂಪದ ದರ ನಿಗದಿ ಮಾಡ್ತಿರೋದಕ್ಕೆ ಓಲಾ ಉಬರ್ ಚಾಲಕಸ ಸಂಘ ಸ್ವಾಗತ ಮಾಡ್ತಿದೆ.
ಒಟ್ಟಿನಲ್ಲಿ ಓಲಾ ಉಬರ್ ಕಂಪನಿನಿಗಳು ಪ್ರಯಾಣಿಕರಿಂದ ಬೇಕಾಬಿಟ್ಟಿ ವಸೂಲಿ ಮಾಡ್ತಿವೆ. ಆದ್ರೆ ಸರ್ಕಾರ ಇವರ ಮೇಲೆ ಕಟ್ಟಿನಿಟ್ಟಿನ ಕ್ರಮಕೈಗೊಳ್ಳುವ ಪೌರುಷ ತೋರುತ್ತಿಲ್ಲ. ಇದೀಗ ಏಕರೂಪದ ದರ ಫಿಕ್ಸ್ ಮಾಡಿ ಮೂಗುದಾರ ಹಾಕೋಕೆ ಹೊರಟಿದೆ. ನಿಜಕ್ಕೂ ಸರ್ಕಾರ ನಿಗದಿ ಮಾಡೋ ದರವನ್ನು ಕಟ್ಟುನಿಟ್ಟಾಗಿ ಅಗ್ರಿಗೇಟರ್ ಕಂಪನಿಗಳು ಪಾಲನೆ ಮಾಡ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.