ಬೆಂಗಳೂರು: ರಾಜಕಾರಣದಲ್ಲಿ ಶತ್ರುತ್ವ ಎನ್ನುವುದು ಶಾಶ್ವತವಲ್ಲ. ಸುಮಲತಾ ಅವರು ನನಗೆ ಶತ್ರುವಲ್ಲ. ಅವರನ್ನು ಭೇಟಿಯಾಗುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

ಮೈಸೂರಿಗೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸುಮಲತಾ ಅವರು ನನಗೆ ಶತ್ರು ಅಲ್ಲ. ಅಂಬರೀಶ್ ಬದುಕಿದ್ದಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ನಮಗೆ ಊಟ ಬಡಿಸಿದ್ದಾರೆ. ಹೀಗಿರುವಾಗ ಆಗಿ ಹೋಗಿದ್ದನ್ನೇ ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದರು.

ರಾಜಕೀಯ ಸನ್ನಿವೇಶ, ಆಯಾ ಸಂದರ್ಭದಲ್ಲಿ ಸಂಘರ್ಷ ಆಗಿದೆ. ಆ ರಾಮಾಂಜನೇಯರ ನಡುವೆಯೇ ಯುದ್ಧ ಆಗಿದೆಯಲ್ಲವೇ? ಅವರ ಮುಂದೆ ನಾವೆಷ್ಟು? ನಾವು ಹುಲು ಮಾನವರು. ಸಮಯ ಬಂದಾಗ ನಾನು ಸುಮಲತಾ ಅವರ ಜೊತೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಪುಟ್ಟರಾಜ ಅವರಿಗೆ ಇನ್ನೂ ಚೆನ್ನಾಗಿರುವ ವಧುವನ್ನೇ ‌ನೋಡೋಣ. ಅವರ ಬಗ್ಗೆ ಬೇರೆಯವರಿಗೆ ಚಿಂತೆ ಬೇಕಿಲ್ಲ ಎಂದು ಹೆಚ್​ಡಿ ಕುಮಾರಸ್ವಾಮಿ ಸಚಿವ ಚಲುವರಾಯಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು. ಮಂಡ್ಯದ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಅಂತ ಅವರು ಹೇಳಿದ್ದಾರೆ. ನನ್ನ ದೃಷ್ಟಿ ಕೆಟ್ಟದ್ದಲ್ಲ. ಅಷ್ಟು ಸಣ್ಣತನದಲ್ಲಿ ಮಾತನಾಡುವುದು ಬೇಡ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕೋಲಾರದಲ್ಲಿ ಕಾಂಗ್ರೆಸ್ ಟಿಕೆಟ್ ಬಗ್ಗೆ ನಡೆದಿರುವ ಹೈಡ್ರಾಮಾವನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅಲ್ಲಿನ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಹಲವಾರು ರೀತಿಯ ಬೆಳವಣಿಗೆಗಳು ಆಗಿವೆ. ಆದ್ದರಿಂದ ನಾವು ಇನ್ನು ಅಧಿಕೃತ ಘೋಷಣೆ ಮುಂದೂಡಿದ್ದೇವೆ ಅಷ್ಟೇ. ತಾವು ಯಾರನ್ನೂ ತೆಗೆದುಕೊಳ್ಳೋಕೆ ಪ್ರಯತ್ನ ಮಾಡುತ್ತಿಲ್ಲ. ನಮ್ಮಲ್ಲಿ ಇಬ್ಬರು ಅಭ್ಯರ್ಥಿಗಳಿದ್ದಾರೆ. ಪಕ್ಷದಲ್ಲಿ ಶಿಸ್ತಿನಿಂದ ಇರುವವರ ಹೆಸರನ್ನು ಘೋಷಣೆ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲ. ಆ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಗಮನ ಇಟ್ಟಿದ್ದೇವೆ ಅಷ್ಟೇ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಕಾಂಗ್ರೆಸ್ ನಾಯಕರ ಒಳಜಗಳದಿಂದ ಎನ್‌ ಡಿಎ ಮೈತ್ರಿಕೂಟಕ್ಕೆ ಲಾಭವಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ನಮಗೆ ಗೆಲುವು ನಿಶ್ಚಿತ. ಅಭ್ಯರ್ಥಿಗಳ ಪಟ್ಟಿ ಸಿದ್ಧವಿದೆ ಎಂದರು.

By admin

Leave a Reply

Your email address will not be published. Required fields are marked *

Verified by MonsterInsights