ಬೆಂಗಳೂರು: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಿದೇಶಿ ಮಹಿಳೆಯೊಬ್ಬರು ಅನುಮಾನಸ್ಪಾದವಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ವಿದೇಶಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೇಲ್ನೋಟಕ್ಕೆ ಹಂತಕರು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಬಿಡಿಎ ಮೇಲ್ಸೇತುವೆ ಸಮೀಪದ ಖಾಸಗಿ ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಉಜ್ಬೇಕಿಸ್ತಾನ ಮೂಲದ ಜರೀನಾ ಮೃತ ದುರ್ದೈವಿ.ಟೂರಿಸ್ಟ್ ವೀಸಾದಡಿ ಜರೀನಾ ನಾಲ್ಕು ದಿನಗಳ ಹಿಂದಷ್ಟೇ ರಾಜಧಾನಿ ಬೆಂಗಳೂರಿಗೆ ಬಂದಿದ್ದರು.
ಹೀಗಾಗಿ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಬುಧವಾರ ಸಂಜೆ 4.30ರ ಸುಮಾರಿಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಮಾಸ್ಟರ್ ಕೀ ಮೂಲಕ ರಾತ್ರಿ ರೂಂನ ಬಾಗಿಲು ತೆರೆದು ನೋಡಿದಾಗ ಶವವಾಗಿ ಪತ್ತೆಯಾಗಿದ್ದಾಳೆ. ಕೂಡಲೇ ಹೋಟೆಲ್ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಎಫ್ಎಸ್ಎಲ್, ಬೆರಳಚ್ಚು ಹಾಗೂ ಶ್ವಾನದಳ ದೌಡಾಯಿಸಿದೆ. ಶೇಷಾದ್ರಿಪುರಂ ಪೊಲೀಸರು ಮಹಿಳೆ ತಂಗಿದ್ದ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಖಾಸಗಿ ಹೋಟೆಲ್ ಮ್ಯಾನೇಜರ್ ಕೊಟ್ಟ ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಇರುವುದರಿಂದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.