Tuesday, January 27, 2026
26.7 C
Bengaluru
Google search engine
LIVE
ಮನೆರಾಜಕೀಯಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ರಾಯಭಾರಿಗಳು: ಡಿಕೆಶಿ

ಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ರಾಯಭಾರಿಗಳು: ಡಿಕೆಶಿ

ನಾನು ಹಾಗೂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿ, ಅಲ್ಲಿ ನಾವು ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಘೋಷಣೆ ಮಾಡಿದೆವು. ಈ ಯೋಜನೆಯಿಂದ 1.50 ಕೋಟಿ ಮನೆಗಳಿಗೆ ಪ್ರಯೋಜನವಾಗುತ್ತಿದೆ ಎಂದು ಡಿಸಿಎಂ. ಡಿ.ಕೆ. ಶಿವಕುಮಾರ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಿದೆವು. ನಾವು ಅಕ್ಕಿ ಖರೀದಿ ಮಾಡಲು ಕೇಂದ್ರಕ್ಕೆ ಮನವಿ ಮಾಡಿದರೆ, ಕೇಂದ್ರ ಸರ್ಕಾರ ನಿರಾಕರಿಸಿತು. ಹೀಗಾಗಿ ನಮ್ಮ ಸರ್ಕಾರದಲ್ಲಿ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ ಎಂದು ಹೇಳಿದರಲ್ಲದೇ, ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾದ ಸಾಧನೆಗಳು ಹಾಗೂ ನೀಡಲಾದ ಐದು ಗ್ಯಾರಂಟಿಗಳ ಬಗ್ಗೆ ತಿಳಿಸಿದರು.

ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಬಡ ಕುಟುಂಬಗಳಿಗೆ ಮಾಸಿಕ 5-6 ಸಾವಿರ ಉಳಿತಾಯವಾಗುತ್ತದೆ. ಆಮೂಲಕ ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡಲಾಗಿದೆ. ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದು ವಿಶ್ಲೇಷಿಸಿದರು.ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್ ಪಕ್ಷ ನಿಮ್ಮನ್ನು ನಂಬಿದೆ. ನೀವು ಈ ನಂಬಿಕೆ ಉಳಿಸಿಕೊಳ್ಳಬೇಕು. ನಾವು ದೊಡ್ಡ ಹುದ್ದೆ ಕೊಟ್ಟಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಸಾಧ್ಯವಾದಷ್ಟು ಗೌರವ ಹಾಗೂ ಅಧಿಕಾರ ನೀಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಕರ್ನಾಟಕ ರಾಜ್ಯದ 3.71 ಲಕ್ಷ ಕೋಟಿ ಮೊತ್ತದ ಬಜೆಟ್ ನಲ್ಲಿ 56 ಸಾವಿರ ಕೋಟಿ ಮೀಸಲಿಡಲಾಗಿದೆ. ಅಭಿವೃದ್ಧಿಗೆ 1.20 ಲಕ್ಷ ಕೋಟಿ ಮೀಸಲು ಇಟ್ಟಿದ್ದೇವೆ.ನಮ್ಮ ಯೋಜನೆಗಳಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿ ಹುಂಡಿ ತುಂಬುತ್ತಿದೆ. ಮಹಿಳೆಯರು ನಿಮ್ಮ ಹೆಸರಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.

ಎಐಸಿಸಿ ನಾಯಕರು ಕೂಡ ಐದು ನ್ಯಾಯ ಯೋಜನೆಗಳನ್ನು ಘೋಷಿಸಿದ್ದು, ಈ ನ್ಯಾಯ ಯೋಜನೆಗಳಲ್ಲಿ ತಲಾ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಿಳಾ ನ್ಯಾಯ ಯೋಜನೆಯಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮನೆಯೊಡತಿಯರಿಗೆ ವರ್ಷಕ್ಕೆ 1 ಲಕ್ಷ, ಕೇಂದ್ರದ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲುಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ವೇತನದಲ್ಲಿ ಕೇಂದ್ರದ ಪಾಲು ದುಪ್ಪಟ್ಟು ಮಾಡಲಾಗುವುದು.

ರೈತ ನ್ಯಾಯದಲ್ಲಿ ಕಾನೂನು ಬದ್ಧ ಕನಿಷ್ಠ ಬೆಂಬಲ ಬೆಲೆ, ಕೃಷಿ ಕ್ಷೇತ್ರ ಜಿಎಸ್ಟಿ ಮುಕ್ತ. ಕೃಷಿ ಸಾಲ ಮನ್ನಾ ಆಯೋಗ ಸ್ಥಾಪನೆ. ಶ್ರಮಿಕ ನ್ಯಾಯದಲ್ಲಿ ಕಾರ್ಮಿಕರಿಗೆ ಆರೋಗ್ಯದ ಹಕ್ಕು, ಕಾರ್ಮಿಕ ವಿರೋಧಿ ಕಾನೂನು ರದ್ದು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಗರ ಉದ್ಯೋಗ ಖಾತ್ರಿ. ಹೀಗೆ ಐದು ನ್ಯಾಯ ಯೋಜನೆಯಲ್ಲಿ 25 ಗ್ಯಾರಂಟಿ ಗಳನ್ನ ಘೋಷಣೆ ಮಾಡಲಾಗಿದೆ.

ಬಿಜೆಪಿಯವರು ದೇಶದಲ್ಲಿ ಧರ್ಮ, ದೇವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಪರವಾಗಿ ಯಾವುದೇ ಅಲೆ ಇಲ್ಲ. ನಾವು ನಮ್ಮ ಊರುಗಳ ಬಡ ದೇವಾಲಯಗಳ ಅಭಿವೃದ್ಧಿಗೆ ಕಾನೂನು ತಂದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಈ ಕಾನೂನನ್ನು ಪರಿಷತ್ ನಲ್ಲಿ ಮಣಿಸಿದ್ದಾರೆ.

ಈಗ ಈ ಯೋಜನೆಗಳನ್ನು ಜಾರಿಗೊಳಿಸಲು ಈ ಅನುಷ್ಠಾನ ಸಮಿತಿ ಮಾಡಲಾಗಿದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಸಮಿತಿ ಮಾಡಿ ಅವರಿಗೆ ಕಚೇರಿ ಹಾಗೂ ಗೌರವಧನ ನೀಡಲಾಗುವುದು. ಇದರ ಜತೆಗೆ ಆರಾಧನ, ಶಿಕ್ಷಣ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುತ್ತಿದೆ. ನಾವು ನುಡಿದಂತೆ ನಡೆದು ನಿಮಗೆ ಶಕ್ತಿ ನೀಡಿದ್ದೇವೆ. ಈಗ ನೀವು ಪಂಚಾಯ್ತಿ ಮಟ್ಟದಲ್ಲಿ ತಂಡಗಳನ್ನು ರಚಿಸಿ ಮನೆ ಮನೆಗೆ ಹೋಗಿ ಜನರಿಗೆ ಈ ಯೋಜನೆ ತಲುಪಿಸಬೇಕು. ಆ ಮೂಲಕ ನಮಗೆ ನೀವು ಶಕ್ತಿ ನೀಡಬೇಕು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು, ತೆನೆ ಹೊತ್ತ ಮಹಿಳೆ ತೆನೆ ಬಿಸಾಡಿದಳು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಪ್ರಬುದ್ಧವಾಯಿತು, ಕರ್ನಾಟಕ ಸಮೃದ್ಧವಾಯಿತು.
ನಾವು ಎಷ್ಟೇ ದೊಡ್ಡವರಾದರೂ ಕಾರ್ಯಕರ್ತರು. ಹೀಗಾಗಿ ನಾವು ಸ್ವಾಭಿಮಾನ ಬಿಡಬೇಕು. ನಮ್ಮ ಪಕ್ಷದ ಶಾಲು ತ್ರಿವರ್ಣ ಹೊಂದಿದೆ. ಈ ಶಾಲು ಹಾಕಿಕೊಳ್ಳುವ ಅವಕಾಶ ಕಾಂಗ್ರೆಸಿಗರಿಗೆ ಬಿಟ್ಟು ಬೇರೆಯವರಿಗೆ ಇಲ್ಲ.ನೀವು ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲಿಲ್ಲವಾದರೆ ನೀವು ನಾಯಕರಲ್ಲ. ನೀವು ಕೆಲಸ ಮಾಡಿಲ್ಲ ಎಂದರ್ಥ. ಹೀಗಾಗಿ ನೀವು ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತನ್ನಿ, ಪಕ್ಷ ಬಲಪಡಿಸಿ ಎಂದು ಅವರು ತಿಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments