ಬೆಂಗಳೂರು, ಫೆ.18: “ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಧ್ಯದಲ್ಲೇ ಪಾಲಿಕೆ ಬಜೆಟ್ ಮಂಡನೆಯಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ವಿವಿಯ ಜ್ಞಾನಭಾರತಿ ಬಿಪೆಡ್ ಮೈದಾನದಲ್ಲಿ ಭಾನುವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬೆಂಗಳೂರಿನ ಹೊಸ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಿಸಲು ನಮ್ಮದೇ ಆದ ಯೋಜನೆಗಳಿವೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಮೆಟ್ರೋ ಹೋಗುವ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
ಯಶವಂತಪುರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ ಮಾಡಲು ಫೀಸಿಬಲ್ ವರದಿ ಸಿದ್ಧಪಡಿಸಲಾಗುತ್ತಿದೆ. ಸುಮ್ಮನಹಳ್ಳಿ, ಗೊರಗೊಂಟೆ ಪಾಳ್ಯ ಸೇರಿದಂತೆ ಇತರ ಕಡೆಗಳಲ್ಲಿ ಈ ಯೋಜನೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ.
ಇದುವರೆಗೂ 12 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದು, 20 ಸಾವಿರ ಅಹವಾಲುಗಳನ್ನು ದಾಖಲಾಗಿವೆ. ಮುಖ್ಯಮಂತ್ರಿಗಳು ಕೂಡ ಎರಡು ಬಾರಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ಕಾರ್ಯಕ್ರಮದಲ್ಲೂ ಸಾವಿರಾರು ಮಂದಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಅರ್ಜಿಗಳ ವಿಲೇವಾರಿಗೆ ಪ್ರತ್ಯೇಕವಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.
ನೀವು ನಿಮ್ಮ ಸಮಸ್ಯೆ ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಸುತ್ತ ಬಾರದು ಎಂದು ನಾನೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆ ಆಲಿಸುತ್ತಿದ್ದೇನೆ. ನಮ್ಮ ಸರ್ಕಾರ ಸದಾ ನಿಮ್ಮ ಜತೆ ಇರಲಿದೆ. ನಿಮ್ಮ ಎಲ್ಲಾ ಸಮಸ್ಯೆ ಒಂದೇ ದಿನದಲ್ಲಿ ಬಾಗೆ ಹರಿಸಲು ಆಗುವುದಿಲ್ಲ. ಆದರೆ ಹಂತ ಹಂತವಾಗಿ ಬಗೆಹರಿಸುತ್ತೇವೆ.ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಂದ ಕೆಲಸ ಆಗದಿದ್ದಾಗ ಮಾತ್ರ ನೀವು ನಿಮ್ಮ ಸಮಸ್ಯೆಯನ್ನು ನಮ್ಮ ಬಳಿಗೆ ತರುತ್ತೀರಿ.
ಈ ಹಿಂದೆ ಇದ್ದವರ ಯೋಜನೆ, ಅಭಿವೃದ್ಧಿಯ ಆಶ್ವಾಸನೆಗಳು ಬಗ್ಗೆ ಕೇವಲ ಕಿವಿಗೆ ಕೇಳುತ್ತಿತ್ತು. ಆದರೆ ನಮ್ಮ ಕಾರ್ಯಕ್ರಮಗಳು ನಿಮ್ಮೆಲ್ಲರ ಕಣ್ಣಿಗೆ ಕಾಣುತ್ತಿವೆ. ನಮ್ಮ ಎಲ್ಲಾ ಗ್ಯಾರಂಟಿ ಯೋಜನೆಗಳು ಶೆ.95ರಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿವೆ. 5-6% ಜನರಿಗೆ ಮಾತ್ರ ತಾಂತ್ರಿಕ ಸಮಸ್ಯೆಗಳಿಂದ ಹಣ ತಲುಪಿಲ್ಲ. ಅವರ ಸಮಸ್ಯೆ ಬಗೆಹರಿಸಲಾಗುತ್ತದೆ. ಗೃಹಲಕ್ಷ್ಮಿ ಹಣ ತಲುಪುತ್ತಿದೆ, ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೂ ಅದಕ್ಕೆ ಹಣ ನೀಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಸಿಗುತ್ತಿದೆ. ಯುವನಿಧಿ ಯೋಜನೆಯಲ್ಲಿ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಹಿಂದೆ ಇದ್ದ ಯಾವುದಾದರೂ ಸರ್ಕಾರ ಇಂತಹ ಕಾರ್ಯಕ್ರಮ ನೀಡಿದ್ದೇವೆ? ನೀವು ಆರಿಸಿದ ಸರ್ಕಾರ ನುಡಿದಂತೆ ನಡೆಯುತ್ತಿದೆ.
ಇನ್ನು ಬೆಂಗಳೂರಿನಲ್ಲಿರುವ ಎಲ್ಲಾ ಆಸ್ತಿಗಳನ್ನು ಸಮೀಕ್ಷೆ ಮಾಡಿಸಿ, ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ದಾಖಲೆಗಳನ್ನು ತಲುಪಿಸುವ “ನಮ್ಮ ಸ್ವತ್ತು” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ಆಸ್ತಿ ದಾಖಲೆ ಪರಿಶೀಲನೆಯ ಪ್ರಾಯೋಗಿಕ ಕಾರ್ಯಕ್ರಮವನ್ನು ನಿಮ್ಮದೇ ಕ್ಷೇತ್ರದಲ್ಲಿ ಮಾಡಲಾಗಿದೆ. ಈ ವೇಳೆ ಕೆಲವು ಅಧಿಕಾರಿಗಳು ದಾಖಲೆ ತಿದ್ದಲು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ.
ಇನ್ನು ತೆರಿಗೆ ಪಾವತಿ ವಿಚಾರವಾಗಿ ಕಳೆದ ಸರ್ಕಾರ ತಿದ್ದುಪಡಿ ಮಾಡಿದ ಕಾನೂನಿನಲ್ಲಿ ದುಬಾರಿ ದಂಡ ವಿಧಿಸಲಾಗಿದೆ. ಇದನ್ನು ಸರಿಪಡಿಸಲು ಮತ್ತೆ ಕಾನೂನಿಗೆ ತಿದ್ದುಪಡಿ ತರಲಾಗುವುದು. ಇದರಿಂದ ಸರಳವಾದ ತೆರಿಗೆ ವ್ಯವಸ್ಥೆ ಜಾರಿ ಮಾಡಲಾಗುವುದು.
ಯಶವಂತಪುರ, ಆರ್ ಆರ್ ನಗರ ನನ್ನ ಎರಡು ಕಣ್ಣುಗಳಂತೆ:
ಶಾಸಕರಾದ ಸೋಮಶೇಖರ್ ಅವರು ಬಿಡಿಎ ಸಮಸ್ಯೆ, 110 ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಈ ಎರಡು ಕ್ಷೇತ್ರ ನಮಗೆ ಎರಡು ಕಣ್ಣುಗಳಂತೆ. ಇನ್ನು ಬೆಂಗಳೂರು ನಗರಕ್ಕೆ 6 ಟಿಎಂಸಿ ನೀರು ಬಳಕೆಗೆ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ಜನರಿಗಾಗಿ ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದೆ. ಮೇ ತಿಂಗಳ ಒಳಗಾಗಿ ಈ ಕಾವೇರಿ ನೀರು ನಿಮಗೆ ತಲುಪುವಂತೆ ಮಾಡುತ್ತೇವೆ.
ನನ್ನ ಸಹೋದರ ಸುರೇಶ್ ಸಂಸದನಾಗಿ ಅಲ್ಲ, ಪಂಚಾಯ್ತಿ ಸದಸ್ಯನಂತೆ ನಿಮ್ಮ ಮನೆ ಬಾಗಿಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಅವರಂತೆ ಬೀದಿ ಬೀದಿ ಸುತ್ತಿ ಕೆಲಸದ ಮಾಡಿದ ಬೇರೆ ಸಂಸದರನ್ನು ನೋಡಿಲ್ಲ. ಕನಕಪುರದಲ್ಲಿ ನನಗೆ 1.23 ಲಕ್ಷ ಮತಗಳಿಂದ ಗೆಲ್ಲಿಸಿದ್ದರೆ. ಅದಕ್ಕೆ ಡಿ.ಕೆ. ಸುರೇಶ್ ಕಾರಣ. ಚುನಾವಣೆ ಬರುತ್ತಿದೆ. ನೀವು ನಿಮ್ಮ ಸೇವೆ ಮಾಡಿದವರಿಗೆ ಬೆಂಬಲ ನೀಡಬೇಕು. ಬೇರೆಯವರು ಕೆಲವು ಜಾಹೀರಾತಿನಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ನಾವು ಜನರ ಸೇವೆ ಮಾಡುತ್ತಿದ್ದೇವೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಡಿಕೆಶಿವಕುಮಾರ್, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕರ ದೂರಿನ ಬಗ್ಗೆ ಕೇಳಿದಾಗ, “ಅವರು ಜನಪ್ರತಿನಿಧಿಗಳು, ಅವರ ಅಹವಾಲು ಹೇಳಿಕೊಂಡಿದ್ದಾರೆ. ಅವರ ಅಭಿಪ್ರಾಯವನ್ನು ನಾವು ಪರಿಗಣಿಸಿ ಸರಿಪಡಿಸುವ ಕೆಲಸ ಮಾಡುತ್ತೇವೆ” ಎಂದರು.
ವಾಟರ್ ಮಾಫಿಯಾ ಬಗ್ಗೆ ಕೇಳಿದಾಗ, “ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕುಸಿದಿದೆ. ಕೊಳವೆ ಬಾವಿ ಇನ್ನು ಆಳಕ್ಕೆ ಕೊರೆಯುವ ಬಗ್ಗೆ ಸಲಹೆ ನೀಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಇನ್ನು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಾವು 200 ಕೋಟಿ ಅನುದಾನ ನೀಡಿದ್ದೇವೆ” ಎಂದು ತಿಳಿಸಿದರು.


