ಬೆಂಗಳೂರು: ನಗರದಿಂದ ಸುಮಾರು 25 ಕಿಲೋಮಿಟರ್ ದೂರದಲ್ಲಿರುವ ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ ಬೆಂಗಳೂರಿಗೆ ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಬಾಲಕಿಯೊಬ್ಬಳು ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಗಮನಸೆಳೆದಿದ್ದಾಳೆ.

ಸಿಎಂ ಅಂಕಲ್ ನಮ್ಗೆ ಸ್ಕೂಲ್ ಗೆ ಹೋಗಲು ಬಸ್ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾವನಾತ್ಮಕ ಪತ್ರ ಬರೆದ ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಿರುವ 8ನೇ ತರಗತಿ ವಿದ್ಯಾರ್ಥಿನಿ ವಿವೈ ಹರ್ಷಿಣಿ, ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಪರದಾಡಾಡುತ್ತಿದ್ದಾರೆ. ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಸೀಗೇಹಳ್ಳಿ ನಗರದಿಂದ ಸುಮಾರು 25 ಕಿಲೋಮಿಟರ್ ದೂರವಿದೆ. ಹತ್ತಿರದಲ್ಲೇ ಬಿಎಂಟಿಸಿ ವಾಯುವ್ಯ ವಿಭಾಗದ ಡಿಪೋ ಇದೆ. ಇಲ್ಲಿಂದ ಅನೇಕ ಕಡೆ ಬಸ್ಗಳ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿದೆ. ಅಕ್ಕಪಕ್ಕದಲ್ಲಿರುವ ವನಗನಹಟ್ಟಿ, ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೆಹಳ್ಳಿಯಿಂದ ಬೆಂಗಳೂರಿಗೆ ಬಸ್ಗಳ ವ್ಯವಸ್ಥೆಯೇ ಇಲ್ಲ. ಇದರಿಂದ ಬೆಂಗಳೂರಿನಲ್ಲಿರುವ ಶಾಲಾ—ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಪತ್ರದಲ್ಲಿ ಹರ್ಷಿಣಿ ಅಳಲು ತೋಡಿಕೊಂಡಿದ್ದಾಳೆ.


