ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದಿದ್ದಾರೆ.ಆದರೆ ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ಮಾಡಲು ಹೊರಟಿದೆ ಎಂದರು.

ಇನ್ನು ನಾವು 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂಪಾಯಿ ಕೊಡ್ತೀವಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದೇವೆ. ಆದರೂ ಪ್ರಧಾನಿ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ. ಬಿಜೆಪಿ ಬಡವರ, ದುಡಿಯುವವರ, ಶ್ರಮಿಕರ ಪರವಾಗಿ ಇದ್ದಿದ್ದರೆ, ಈ ನಾಡಿನ ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಇದ್ದಿದ್ದರೆ ಅಕ್ಕಿ ಕೊಡುತ್ತಿತ್ತು. ಮೋದಿಗೆ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಹಸಿವು ಮುಕ್ತ ದೇಶ ಬೇಕಾಗಿಲ್ಲ. ನಿಮ್ಮ ಪರವಾಗಿ ಇರುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಹೃದಯದ ಮಾತು ಕೇಳಿ ಮತ ಚಲಾಯಿಸಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಹಸಿವಿನ ಜೊತೆಗೆ ದೇಶವನ್ನು ಅನಕ್ಷರತೆ, ಅನಾರೋಗ್ಯ ಮತ್ತು ನಿರುದ್ಯೋಗ ಮುಕ್ತ ಮಾಡುವುದೇ ನಮ್ಮ ಕಾಂಗ್ರೆಸ್ ಪಕ್ಷದ ಗುರಿ. ನಮ್ಮ ಹಿಂದಿನ ಸರ್ಕಾರದ ಕಾಲದಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಕಾರ್ಯಕ್ರಮಗಳು ಯಶಸ್ವಿಯಾಗಿದೆ.

ಬಸವಣ್ಣನ ಕಾಯಕ ಅನ್ನಭಾಗ್ಯಕ್ಕೆ ಪ್ರೇರಣೆ-ಸಿಎಂ
ನಮ್ಮ ಯೋಜನೆಗಳಲ್ಲಿ ರಾಜಕೀಯ ಲಾಭದ ಉದ್ದೇಶ ಇಲ್ಲ, ನಮ್ಮ ಯೋಜನೆಗಳ ಉದ್ದೇಶ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆ. ರಾಜ್ಯದ ಯಾವುದೇ ಮನೆಯಲ್ಲಿ ಹಸಿವು, ಅನಾರೋಗ್ಯ, ಅನಕ್ಷರತೆ ಮತ್ತು ನಿರುದ್ಯೋಗದಿಂದ ಬಳಲುವರು ಇರದಂತೆ ನೋಡಿಕೊಳ್ಳುವುದೇ ನಮ್ಮ ಆಶಯ ಮತ್ತು ಬದ್ದತೆ ಎಂದರು.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಯೇ ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿಗೆ ತಂದೆ. 2013ರ ಬಸವ ಜಯಂತಿಯ ದಿನವೇ ಜಾರಿಗೆ ಬಂದಿರುವ ಅನ್ನಭಾಗ್ಯ ಯೋಜನೆ ಬಸವಣ್ಣನವರ ದಾಸೋಹದಿಂದ ಪ್ರೇರಿತವಾಗಿರುವುದು ಎಂದು ನೆನಪಿಸಿದರು.ಇನ್ನು ಇದೇ ಸಂದರ್ಭದಲ್ಲಿ ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿಗೆ ಹೆಚ್ಚಳಗೊಳಿಸಿ ಎಂದು ಸಿಎಂ ಮಹತ್ವದ ಘೋಷಣೆ ಮಾಡಿದರು.

By admin

Leave a Reply

Your email address will not be published. Required fields are marked *

Verified by MonsterInsights