ಬೆಂಗಳೂರು: ಉದಯ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ ಧಾರಾವಾಹಿಯಲ್ಲಿ 90ರ ದಶಕದ ಬಹುಬೇಡಿಕೆಯ ನಾಯಕಿ ಚಿತ್ರತಾರೆ ʻಭವ್ಯಾʼ ನಟಿಸುತ್ತಿದ್ದಾರೆ.
ʻಪ್ರೇಮ ಪರ್ವʼ, ʻಪ್ರಳಯಾಂತಕʼ, ʻನೀ ಬರೆದ ಕಾದಂಬರಿʼ, ʻಕೃಷ್ಣ ನೀ ಬೇಗನೆ ಬಾರೋʼ, ʻಕರುಣಾಮಯಿʼ, ʻಹೃದಯಗೀತೆʼ, ʻಮತ್ತೆ ಹಾಡಿತು ಕೋಗಿಲೆʼ, ʻಸಾಂಗ್ಲಿಯಾನʼ ಇತ್ಯಾದಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.
ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್, ರವಿಚಂದ್ರನ್ ಮತ್ತಿತರ ದಿಗ್ಗಜ ಕಲಾವಿದರ ಜತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ, ಟಿವಿ ದಾರವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು. ಭವ್ಯಾ ಅವರದು ʻಮೈನಾʼ ಧಾರಾವಾಹಿಯಲ್ಲಿ ಮಹಿಳಾ ಹಾಸ್ಟೆಲ್ ಮುಖ್ಯಸ್ಥೆ ಅರುಂಧತಿಯ ಪಾತ್ರ.
ಕಟ್ಟುನಿಟ್ಟಾದರೂ ತಾಯಿ ಹೃದಯಿ. ಊರು ಬಿಟ್ಟು ಪರವೂರಿಗೆ ಬಂದಿರುವ ಹೆಣ್ಣುಮಕ್ಕಳೇ ಹೆಚ್ಚಿರುವ ಜಾಗದಲ್ಲಿ ಎಲ್ಲರನ್ನೂ ನಿಯಂತ್ರಿಸುತ್ತ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಅಪರೂಪದ ಪಾತ್ರ.