ಕುದುರೆಗಳನ್ನು ಅಖಾಡಕ್ಕಿಳಿಸಲು ಭಾರೀ ಕಸರತ್ತು ಮಾಡುತ್ತಿವೆ. ರಾಜ್ಯದ 2ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು ನಡೆಸಿದೆ. ನಾಯಕರುಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕೊನೆಗೂ ಫೈನಲ್ ಆಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಗಳ ಲಾಬಿ ಜೋರಾಗಿದೆ.
ಕಾಂಗ್ರೆಸ್ ನಾಯಕರಿಗೆ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಬಾಗಲಕೋಟೆ ಕ್ಷೇತ್ರಗಳಿಗೆ ಟಿಕೆಟ್ಗಾಗಿ ಪೈಪೋಟಿ ನಡೆದಿದ್ದು ಈ ಪೈಕಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿಕೊಂಡು ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಫೈನಲ್ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕಣಕ್ಕಿಳಿಸಲು ಶಾಸಕ ತುಕಾರಾಂ ಅವರನ್ನು ಮನವೊಲಿಸಲಾಗಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ತುಕಾರಾಂ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಿಂದ ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಸಚಿವ ಬಿ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಅಳಿಯ ಮುರಳಿ ಕೃಷ್ಣ, ವಕೀಲ ಗುಜ್ಜಲ ನಾಗರಾಜ್ ಸೇರಿದಂತೆ ಮುಂತಾದವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದ್ರೆ, ಕಾಂಗ್ರೆಸ್ ಅಂತಿಮವಾಗಿ ಇ.ತುಕಾರಾಂ ಪುತ್ರಿ ಚೈತನ್ಯ ಅವರನ್ನು ಅಖಾಡಕ್ಕಿಳಿಸಲು ನಿರ್ಧರಿಸಿತ್ತು. ಆದ್ರೆ, ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸುತ್ತಿದ್ದಂತೆಯೇ ಕಾಂಗ್ರೆಸ್ ಗೇಮ್ ಪ್ಲ್ಯಾನ್ ಬದಲಾಗಿದ್ದು, ಪುತ್ರಿ ಬದಲಿಗೆ ನೀವೇ ಸ್ಪರ್ಧೆ ಮಾಡಿ ಎಂದು ಕಾಂಗ್ರೆಸ್, ತುಕರಾಂಗೆ ಸೂಚಿಸಿದೆ. ಆದ್ರೆ, ಇದಕ್ಕೆ ತುಕರಾಂ ನಿರಾಕಿರಿದ್ದು, ನನಗೆ ಬೇಡ ನನ್ನ ಪುತ್ರಿಗೆ ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದರು.
ಇದೀಗ ಅಂತಿಮವಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಇಂದು ತುಕರಾಂ ಅವರನ್ನು ಕೂರಿಸಿಕೊಂಡು ಬಳ್ಳಾರಿಯಿಂದ ಸ್ಪರ್ಧೆ ಮಾಡಬೇಕೆಂದು ಮನವೊಲಿಸಿದ್ದು, ಇದು ಯಶಸ್ವಿಯಾಗಿದೆ. ಹೀಗಾಗಿ ಬಳ್ಳಾರಿಯಲ್ಲಿ ಶ್ರೀರಾಮುಲು ವಿರುದ್ಧ ತುಕರಾಂ ನಿಲ್ಲುವುದು ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಇದೊಂದಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಉಗ್ರಪ್ಪ ನಿರಾಸೆಯಾಗಿದೆ.
ಲೋಕಸಭಾ ಕ್ಷೇತ್ರದ ಒಟ್ಟು ಅವಳಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ 6 ಮಂದಿ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ತಲಾ ಒಬ್ಬ ಜೆಡಿಎಸ್ ಮತ್ತು ಬಿಜೆಪಿ ಶಾಸಕರಿದ್ದಾರೆ. ಸಿರುಗುಪ್ಪ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರಿದರೆ, ಹರಪನಹಳ್ಳಿ ಕ್ಷೇತ್ರ ದಾವಣಗೆರೆ ಕ್ಷೇತ್ರಕ್ಕೆ ಸೇರಿದೆ. ಹೀಗಾಗಿ ಬಳ್ಳಾರಿಯಲ್ಲಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು, ವಿಜಯನಗರ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಲೆಕ್ಕಚಾರದಿಂದ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಪಕ್ಷ ಸಂಘಟನೆ, ಹಣಬಲ, ಪಕ್ಷನಿಷ್ಠೆ ಮುಂತಾದವುಗಳನ್ನು ಪರಿಗಣಿಸಿ ಕಾಂಗ್ರೆಸ್ ತುಕರಾಂ ಅವರಿಗೆ ಮಣೆ ಹಾಕಿದೆ.